

Mohammed Siraj: ಏ.02ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆರ್ಸಿಬಿ ಪಾಲಿಗೆ ದುಃಸ್ವಪ್ನದಂತೆ ಕಾಡಿದ ವೇಗಿ ಮೊಹಮ್ಮದ್ ಸಿರಾಜ್, ಬರೋಬ್ಬರಿ ಮೂರು ಬಹುಮುಖ್ಯ ವಿಕೆಟ್ಗಳನ್ನು ಪಡೆದು ತಂಡದ ಪರ ಮಿಂಚಿದರು.
ಆರ್ಸಿಬಿ ಮತ್ತು ಜಿಟಿ ನಡುವಿನ ಪಂದ್ಯ ಮುಗಿದ ಬೆನ್ನಲ್ಲೇ ಜಾಲತಾಣಗಳಲ್ಲಿ ಸಿರಾಜ್ಗೆ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆಗಳು ಹರಿದುಬಂದಿತು. ಇತರೆ ಫ್ರಾಂಚೈಸಿಗಳ ದಿಗ್ಗಜ ಆಟಗಾರರು ಸೇರಿದಂತೆ ಮಾಜಿ ಹಿರಿಯ ಕ್ರಿಕೆಟಿಗರು ಸಿರಾಜ್ ಬೌಲಿಂಗ್ ವೈಖರಿಯನ್ನು ಕೊಂಡಾಡಿದರು. ಇನ್ನು ಆರ್ಸಿಬಿ ಸೋಲುತ್ತಿದ್ದಂತೆ ಮನದೊಳಗೆ ಸಂತಸಪಟ್ಟ ವೀರೆಂದ್ರ ಸೆಹ್ವಾಗ್, "ಚಿನ್ನಸ್ವಾಮಿಯಲ್ಲಿ ಬೌಲಿಂಗ್ ಮಾಡಿದ ಸಿರಾಜ್, ಹೊಸ ಬಾಲ್ನಲ್ಲಿಯೂ ಕಮಾಲ್ ಮಾಡಿದ್ದು ನಿಜಕ್ಕೂ ಮೆಚ್ಚುವಂತದ್ದು" ಎಂದರು.
"ಈ ಮೂಲಕ ತಮ್ಮ ದಾಖಲೆಯನ್ನು ಉಳಿಸಿಕೊಂಡರು. ಮೊದಲ ಮೂರು ಓವರ್‌ಗಳಲ್ಲಿ ಕೇವಲ 12ರಿಂದ 13 ರನ್‌ಗಳನ್ನು ಕೊಟ್ಟ ಮೊಹಮ್ಮದ್ ಸಿರಾಜ್, ಮೂರು ಬಹುಮುಖ್ಯ ವಿಕೆಟ್ಗಳನ್ನು ಕಿತ್ತು ಬಿಸಾಡಿದರು. ಅವರು ಇನ್ನೊಂದು ವಿಕೆಟ್ ಪಡೆಯಬಹುದಿತ್ತು. ಹೊಸ ಬಾಲ್ನಲ್ಲಿಯೂ ಸ್ವಿಂಗ್ ಮಾಡಿ ತೋರಿಸಿದ್ದಾರೆ. ಈಗಲೂ ಅವರಲ್ಲಿ ಆ ಕಿಚ್ಚಿದೆ. ಎಲ್ಲೋ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿಲ್ಲ ಎಂಬ ಬೇಸರ, ನೋವು ಅವರಲ್ಲಿ ಕಾಡುತ್ತಿತ್ತು. ಇದನ್ನು ನಾನು ಗಮನಿಸಿದೆ" ಎಂದು ಹೇಳಿದರು.
"ತಮ್ಮನ್ನು ಐಪಿಎಲ್ ಹರಾಜಿನಲ್ಲಿ ತಂಡದಲ್ಲಿ ಉಳಿಸಿಕೊಳ್ಳದೆ ಹೊರಗೆ ನೂಕಿದ್ದೀರಿ. ಈಗ ನಾನು ನಿಮಗೆ ತೋರಿಸುತ್ತೇನೆ ಎಂಬ ಕಿಚ್ಚನಿಂದಲೇ ಅವರು ಪಂದ್ಯದಲ್ಲಿ ಆಡಿ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸಿರಾಜ್ ಶೀಘ್ರವೇ ಟೀಮ್ ಇಂಡಿಯಾ ಸೇರಲಿ ಎಂಬುದು ನನ್ನ ಆಶಯ" ಎಂದು ಸೆಹ್ವಾಗ್ ಹೇಳಿದ್ದಾರೆ.
"ನಾನು ಸ್ವಲ್ಪ ಭಾವುಕನಾಗಿದ್ದೆ. ಕಾರಣ, ಆ ತಂಡದಲ್ಲಿ ಏಳು ವರ್ಷಗಳ ಕಾಲ ಕೆಂಪು ಜೆರ್ಸಿ ಧರಿಸಿ ಆಡಿದ್ದೇನೆ. ಆದರೆ ಈಗ ಬಣ್ಣ ಬದಲಾಗಿದೆ. ನಾನು ಸ್ವಲ್ಪ ನರ್ವಸ್ ಆಗಿದ್ದೆ ಮತ್ತು ಸ್ವಲ್ಪ ಬೇಸರಕ್ಕೂ ಒಳಗಾಗಿದ್ದೆ. ಆದರೆ, ನನ್ನ ಕೈಗೆ ಬಾಲ್ ಸಿಕ್ಕ ಕ್ಷಣ, ನನ್ನ ಪ್ರದರ್ಶನ ನೀಡುವುದರ ಬಗ್ಗೆ ಹೆಚ್ಚು ಗಮನ ಹರಿಸಿದೆ" ಎಂದಿದ್ದಾರೆ ಸಿರಾಜ್,(ಏಜೆನ್ಸೀಸ್).