ಸರ್ಕಾರಿ ಶಾಲೆಯನ್ನೇ ಮುಚ್ಚುವ ಹುನ್ನಾರ, ನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ಲಕ್ಷೃ, ಮೂವರು ಶಿಕ್ಷಕಿಯರ ಅಮಾನತು, ಆಘಾತಕಾರಿ ಸಂಗತಿ ಬಿಚ್ಚಿಟ್ಟ ಬಿಇಒ ಆದೇಶ

DDPI Office
Published on

ವಿಜಯಪುರ: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನೇ ಮುಚ್ಚಿಸಿ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಹುನ್ನಾರ ನಗರ ಪ್ರದೇಶಗಳಲ್ಲಿ ನಡೆಯುತ್ತಿದೆಯಾ? ಶಿಕ್ಷಕರೇ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸುಫಾರಿ ಪಡೆದರಾ? ಎಂಬ ಪ್ರಶ್ನೆ ಉದ್ಭವಿಸಲು ಕಾರಣ ಬಿಇಒ ಹೊರಡಿಸಿದ ಮೂವರು ಶಿಕ್ಷಕಿಯರ ಅಮಾನತು ಆದೇಶ.

ಮಹಾನಗರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡದೇ ಖಾಸಗಿ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡುತ್ತಿರುವ ಅಂಶ ಶಿಕ್ಷಕಿಯರ ಅಮಾನತು ಆದೇಶದಿಂದ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯಬೇಕಿದ್ದ ಸರ್ಕಾರಿ ಶಾಲೆಗಳನ್ನೇ ಮುಚ್ಚಿಸಿ ಖಾಸಗಿ ವ್ಯವಸ್ಥೆಗೆ ಮಣೆ ಹಾಕುವ ಪ್ರಯತ್ನವೊಂದು ಸದ್ದಿಲ್ಲದೇ ನಡೆಯುತ್ತಿದೆ ಎಂಬುದರಕ್ಕೆ ಬಿಇಒ ನೀಡಿದ ಅಮಾನತು ಆದೇಶವೇ ಸಾಕ್ಷಿಯಾಗಿದೆ.

ಏನಿದು ಪ್ರಕರಣ?

ಕರ್ತವ್ಯ ನಿರ್ಲಕ್ಷೃದ ಮೂಲಕ ಸರ್ಕಾರಿ ಶಾಲೆಯನ್ನೇ ಮುಚ್ಚುವ ದುರುದ್ದೇಶ ಹೊಂದಿರುವ ಆರೋಪದ ಮೇರೆಗೆ ವಿಜಯಪುರ ನಗರ ಬಿಇಒ ಬಸವರಾಜ ತಳವಾರ ಅವರು ಮೂವರು ಶಿಕ್ಷಕಿಯರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ವಿಜಯಪುರ ನಗರದ ಕೆಜಿಎಸ್ ನಂ.2ರ ಪ್ರಭಾರಿ ಮುಖ್ಯ ಶಿಕ್ಷಕಿ ಎನ್.ಎಂ. ಅಣ್ಣೆಪ್ಪನವರ, ಸಹ ಶಿಕ್ಷಕಿ ಆರ್.ಎಂ. ಹೋಳಿನ ಹಾಗೂ ಸಹ ಶಿಕ್ಷಕಿ ಸಿ.ಎಸ್.ಮೇತ್ರಿ ಅಮಾನತಗೊಂಡಿದ್ದಾರೆ. ಈ ಮೂವರು ಶಿಕ್ಷಕಿಯರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯನ್ನು ಮುಚ್ಚುವ ದುರುದ್ದೇಶದ ಹುನ್ನಾರ ನಡೆಸಿರುವುದ ಮತ್ತು ಕರ್ತವ್ಯ ಲೋಪ ಎಸಗಿರುವುದರಿಂದ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾಗಿ ಬಿಇಒ ಬಸವರಾಜ ತಳವಾರ ತಿಳಿಸಿದ್ದಾರೆ.

ದುರುದ್ದೇಶ-ಹುನ್ನಾರವೇನು?

ಅಮಾನತುಗೊಂಡ ಶಿಕ್ಷಕಿಯರು ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ವಿಫಲವಾಗಿದ್ದಲ್ಲದೇ ಇವರು ಮಕ್ಕಳನ್ನೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬೋಧನೆಯಲ್ಲಿ ನಿರಾಸಕ್ತಿ, ಮಕ್ಕಳ ಬಗ್ಗೆ ವೈಯಕ್ತಿಕ ಕಾಳಜಿ ಶೂನ್ಯ, ಗೃಹಪಾಠ ನೀಡದಿರುವುದು, ಸಾಮರ್ಥ್ಯ ಮತ್ತು ಕಲಿಕಾಂಶಗಳಿಗೆ ಒತ್ತು ನೀಡಿ ಬೋಧಿಸದೇ ಇರುವುದು, ಮಕ್ಕಳ ಕಲಿಕೆ ಬಗ್ಗೆ ಚಿಂತಿಸದೇ ಕಾಲ ಹರಣ ಮಾಡುವುದು, ಟೀಕೆ-ಟಿಪ್ಪಣೆಯಲ್ಲಿಯೇ ಕಾಲ ಕಳೆಯುವುದು, ಅನಧಿಕೃತ ಗೈರಾಗುವುದು, ನಿಯಮಬಾಹಿರವಾಗಿ ಶಾಲೆಗೆ ಬೀಗ ಹಾಕಿ ವೈಯಕ್ತಿಕ ಕೆಲಸಕ್ಕೆ ಹೊರಗಡೆ ತೆರಳುವುದು, ಈ ಕುರಿತು ಇಲಾಖೆ ಸಿಬ್ಬಂದಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡುವುದನ್ನು ರೂಢಿಯಾಗಿಸಿಕೊಂಡಿದ್ದರು.

ಪಾಲಕರೊಂದಿಗೆ ಸರಿಯಾಗಿ ವರ್ತಿಸುತ್ತಿರಲಿಲ್ಲ. ಸಾರ್ವಜನಿಕರಿಗೆ ಇಲಾಖೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದರು. ಇಲಾಖೆಯಿಂದ ತಂಡ ಕಳುಹಿಸಲಾಗಿತ್ತು ಅಲ್ಲದೇ ನೊಟೀಸ್ ನೀಡಿದರೂ ಸಮರ್ಪಕವಾಗಿ ಉತ್ತರ ನೀಡಿರಲಿಲ್ಲ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿದ ಕಾರಣಕ್ಕೆ ಎಸ್‌ಡಿಎಂಸಿ ಹಾಗೂ ಪಾಲಕ ಅಥವಾ ಪೋಷಕರ ಗಮನಕ್ಕೆ ತರದೇ ಶಾಲೆಯಲ್ಲಿನ ಮಕ್ಕಳ ಹೆಸರನ್ನು ಬೇರೆ ಶಾಲೆಗೆ ವರ್ಗ ಮಾಡಿರುವುದು ಕಂಡು ಬಂದಿದೆ. ಮಕ್ಕಳ ಸಂಖ್ಯೆಯೇ ಇಲ್ಲದಂತೆ ಮಾಡಿ ಶಾಲೆಯನ್ನೇ ಮುಚ್ಚಿಸುವ ಹುನ್ನಾರ ಕಂಡು ಬಂದಿದೆ ಎಂದು ಬಿಇಒ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net