"ಫಿಟ್ನೆಸ್​ ಕಾಪಾಡಿಕೊಂಡರು..." ಆಸೀಸ್​ ಸರಣಿಯ ಆಯ್ಕೆ ಕುರಿತು ಕಡೆಗೂ ಮೌನಮುರಿದ ಮೊಹಮ್ಮದ್​ ಶಮಿ | Mohammed Shami

ವಿಜಯವಾಣಿ (7)
Published on

Mohammed Shami: ಇದೇ ಅ.19ರಿಂದ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಸನ್ನದ್ಧಗೊಂಡಿದೆ. ಈಗಾಗಲೇ ಎರಡು ಸರಣಿಗೂ ಪ್ರತ್ಯೇಕ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರನ್ನು ಎರಡಕ್ಕೂ ಪರಿಗಣಿಸದೆ ಹೋಗಿದ್ದು ಸದ್ಯ ಹಲವರ ಪ್ರಶ್ನೆಗೆ ಕಾರಣವಾಗಿದೆ. ಈ ಕುರಿತು ಇಲ್ಲಿಯವರೆಗೆ ಎಲ್ಲಿಯೂ ಪ್ರತಿಕ್ರಿಯೆ ನೀಡದ ಶಮಿ, ಇದೀಗ ಕಡೆಗೂ ಮೌನ ಮುರಿದಿದ್ದಾರೆ.

ಟ್ರೋಲ್​, ಮೀಮ್​ಗಳು

ಈ ಹಿಂದೆ ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯಿಂದ ಶಮಿಯನ್ನು ಕೈಬಿಟ್ಟಿದ್ದ ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ, ಇದೀಗ ಆಸೀಸ್​ ವಿರುದ್ಧದ ಸರಣಿಯಿಂದಲೂ ಕೈಬಿಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಮಿ, "ನನ್ನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಟ್ರೋಲ್​, ಮೀಮ್ಸ್​ಗಳನ್ನು ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ಸರಣಿಯಿಂದ ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಅನ್ನೋದಕ್ಕೆ ಮತ್ತು ನನ್ನ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಯಲು ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ, ಆಯ್ಕೆ ಆಗುವುದು, ಬಿಡುವುದು ಇದ್ಯಾವುದು ನಮ್ಮ ಕೈಯಲ್ಲಿಲ್ಲ" ಎಂದರು.

ಇದೇ ಕಾರಣಕ್ಕೆ ಕೈಬಿಟ್ಟರು

"ಎಲ್ಲವೂ ಆಯ್ಕೆ ಸಮಿತಿಯ ನಿರ್ಧಾರಗಳಿಂದಲೇ ನಡೆಯುವುದು. ಕೋಚ್​, ಕ್ಯಾಪ್ಟನ್​ ಮತ್ತು ಸಮಿತಿಯ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಅವಲಂಬಿತ. ನಾನು ಆ ತಂಡದಲ್ಲಿ ಇರಬೇಕು ಎಂದು ಅವರು ಬಯಸಿದರೆ, ಖಂಡಿತ ಆಯ್ಕೆ ಆಗ್ತೀನಿ. ಇಲ್ಲ, ನಾನಿನ್ನು ಕೆಲವು ವರ್ಷಗಳು ಕಾಯಬೇಕು ಎಂದರೆ, ಹೀಗೆ ಇರಬೇಕು ಅಷ್ಟೇ. ಪ್ರಸ್ತುತ, ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೀನಿ. ಮೈದಾನದಲ್ಲಿ ಪ್ರ್ಯಾಕ್ಟಿಸ್​ ಕೂಡ ಮಾಡ್ತಿದ್ದೀನಿ. ದುಲೀಪ್ ಟ್ರೋಫಿ ಆಡಿದೆ. 35 ಓವರ್​ ಮಾಡಿದೆ. ಅಲ್ಲಿ ಯಾವುದೇ ಫಿಟ್ನೆಸ್​ ಸಮಸ್ಯೆ ನನ್ನನ್ನು ಕಾಡಲಿಲ್ಲ. ನನ್ನ ಓಟ ಚೆನ್ನಾಗಿಯೇ ಇದೆ" ಎಂದು ಯೂಟ್ಯೂಬ್ ಚಾನೆಲ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net