

Dude: ಈ ವರ್ಷದ ಫೆಬ್ರವರಿಯಲ್ಲಿ ತೆರೆಕಂಡು ಸೂಪರ್ಹಿಟ್ ಆದ ತಮಿಳು ಚಿತ್ರ 'ಡ್ರ್ಯಾಗನ್', ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಸಿನಿಮಾ ಮೂಲಕ ಸಿನಿಪ್ರಿಯರ ಮನ ಗೆದ್ದ ನಟ ಪ್ರದೀಪ್ ರಂಗನಾಥನ್ ಇದೀಗ ತಮ್ಮ ಮುಂಬರುವ ಡ್ಯೂಡ್ ಚಿತ್ರದ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಇದರ ನಡುವೆ ತಮ್ಮ ಚೊಚ್ಚಲ ನಿರ್ದೇಶನದ ಮುಖೇನ ಪೂರ್ಣ ನಿರ್ದೇಶಕರಾಗಿ ಹೊರಹೊಮ್ಮಲು ಸಜ್ಜಾಗಿರುವ ಕೀರ್ತಿಸ್ವರನ್, ಚಿತ್ರ ಕಥೆ ತಲೈವಾ ಅವರನ್ನು ಗಮನದಲ್ಲಿಟ್ಟುಕೊಂಡು ಬರೆದದ್ದು ಎಂದು ಹೇಳಿಕೊಂಡಿದ್ದಾರೆ.
ಕಳೆದ ಏಳು ವರ್ಷಗಳಿಂದ ಸಿನಿಮಾ ನಿರ್ಮಾಪಕಿ ಸುಧಾ ಕೊಂಗರ ಅವರೊಂದಿಗೆ ಕೆಲಸ ಮಾಡಿದ್ದ ಕೀರ್ತಿಸ್ವರನ್, 'ಡ್ಯೂಡ್' ಚಿತ್ರದ ಮೂಲಕ ನಿರ್ದೇಶನಕ್ಕೆ ಜಿಗಿದಿದ್ದಾರೆ. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದು, ಚಿತ್ರದಲ್ಲಿ ಡ್ರ್ಯಾಗನ್ ಖ್ಯಾತಿಯ ಪ್ರದೀಪ್ ರಂಗನಾಥನ್ ಮತ್ತು ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರವು ಇದೇ ದೀಪಾವಳಿಗೆ ತೆರೆಕಾಣಲು ಎದುರುನೋಡುತ್ತಿದೆ.
ಚಿತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ಡೆಬ್ಯೂ ನಿರ್ದೇಶಕರು, "ಕಥೆ ಬರೆಯಲು ಶುರು ಮಾಡಿದಾಗ ರಜನಿಕಾಂತ್ ಅವರನ್ನು ಗಮನದಲ್ಲಿಟ್ಟುಕೊಂಡೇ ಬರೆದದ್ದು. ಅಂದರೆ, ರಜಿನಿ ಸರ್ 30 ವರ್ಷ ವಯಸ್ಸಿನಲ್ಲಿದ್ದಾಗ ಈ ಪಾತ್ರವನ್ನು ಹೇಗೆ ನಿಭಾಯಿಸುತ್ತಿದ್ದರು ಎಂಬುದನ್ನು ತಲೆಯಲ್ಲಿ ಇರಿಸಿಕೊಂಡು, ಕಥೆಯನ್ನು ಬರೆದೆ. ಅಸಲಿಗೆ ಈ ಪಾತ್ರಕ್ಕೆ ಪ್ರದೀಪ್ ಸೂಕ್ತವಾಗಿದ್ದಾರೆ. ಪಾತ್ರದ ಬಗ್ಗೆ ಕೇಳುತ್ತಿದ್ದಂತೆ ಅವರು ಕೂಡ ಬಹುಬೇಗನೇ ಒಪ್ಪಿಕೊಂಡರು" ಎಂದು ಹೇಳಿದ್ದಾರೆ.
"ಈ ಸಿನಿಮಾದ ಕಥೆ ಕೇವಲ ಪ್ರೀತಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ಹಲವಾರು ವಿಷಯಗಳನ್ನು ಒಳಗೊಂಡಿದೆ. ಇದೆಲ್ಲವೂ ಚಿತ್ರವನ್ನು ನೋಡುವ ವೀಕ್ಷಕರಿಗೆ ಸ್ಪಷ್ಟವಾಗಿ ಅರ್ಥವಾಗಲಿದೆ. ನನ್ನ ಚೊಚ್ಚಲ ನಿರ್ದೇಶನದ ಚಿತ್ರವು ಇದೇ ದೀಪಾವಳಿಗೆ ರಿಲೀಸ್ ಆಗುತ್ತಿರುವುದು ನಿಜಕ್ಕೂ ಕನಸು ನನಸಾಗುತ್ತಿದೆ ಎಂಬ ಭಾವನೆಯನ್ನು ನೀಡಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).