Border-Gavaskar​ ಟ್ರೋಫಿಯಿಂದ Shami ಔಟ್​? ಗಾಯದ ಬಗ್ಗೆ ವೇಗಿ ಹೇಳಿದ್ದಿಷ್ಟು

Mohammed Shami
Published on

ಮುಂಬೈ: ಟೀಮ್​ ಇಂಡಿಯಾದ ವೇಗದ ಬೌಲರ್​ ಮೊಹಮ್ಮದ್​ ಶಮಿ (Mohammed Shami) ಹಲವು ತಿಂಗಳುಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದು, 2023ರಲ್ಲಿ ನಡೆದ ಏಕದಿನ ವಿಶ್ವಕಪ್​ ಬಳಿಕ ಶಮಿ ತಂಡದ ಪರ ಕಾಣಿಸಿಕೊಂಡಿಲ್ಲ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಶಮಿ ಅವರನ್ನು ಮುಂಬರು ಬಾರ್ಡರ್​-ಗವಾಸ್ಕರ್​ ಟ್ರೋಫಿಯಿಂದ (Border-Gavaskar Trophy) ಹೊರಗಿಡಲಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಶಮಿ ಸಾಮಾಜಿಕ ಜಾಲತಾಣದ ಮೂಲಕ ಉತ್ತರಿಸಿದ್ದಾರೆ.

2023ರಲ್ಲಿ ನಡೆದ ಏಕದಿನ ವಿಶ್ವಕಪ್​ ಬಳಿಕ ಶಮಿ ಟೀಮ್​ ಇಂಡಿಯಾ ಪರ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಸ್ನಾಯುರಜ್ಜು ಗಾಯಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಹೊರಗುಳಿದು ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಶೇರ್ ಮಾಡುವ ಮೂಲಕ ಶಮಿ ಟೀಮ್ ಇಂಡಿಯಾ ಪರ ಕಮ್‌ಬ್ಯಾಕ್ ಮಾಡಲು ರೆಡಿ ಎಂದು ಹೇಳಿದ್ದಾರೆ.

ಆದರೆ, ಅವರ ಮೊಣಕಾಲಿನ ಗಾಯ ಮತ್ತೆ ಉಲ್ಬಣಗೊಂಡಿದ್ದು, ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ಆರಂಭಿಸಿದೆ. ಮೊಣಕಾಲಿನಲ್ಲಿ ಹೆಚ್ಚುತ್ತಿರುವ ಊತದಿಂದಾಗಿ ಶಮಿ ಚೇತರಿಸಿಕೊಳ್ಳಲು 6 ರಿಂದ 8 ವಾರಗಳು ಬೇಕಾಗಬಹುದು ಎಂದು ವರದಿಗಳು ಸೂಚಿಸಿವೆ. ಈ ಕಾರಣಕ್ಕಾಗಿ ಶಮಿ ಅವರನ್ನು ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಹೇಳಲಾಗಿದ್ದು, ಈ ಬಗ್ಗೆ ಮೊಹಮ್ಮದ್​ ಶಮಿ ಉತ್ತರಿಸಿದ್ದಾರೆ.

ಈ ರೀತಿಯ ಆಧಾರರಹಿತ ವದಂತಿಗಳು ಏಕೆ? ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಮತ್ತು ಚೇತರಿಸಿಕೊಳ್ಳಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ. ಬಾರ್ಡರ್ ಗವಾಸ್ಕರ್ ಸರಣಿಯಿಂದ ಹೊರಗುಳಿದಿದ್ದೇನೆ ಎಂದು BCCI ಅಥವಾ ನಾನು ಹೇಳಿಲ್ಲ. ಅಂತಹ ಸುದ್ದಿಗಳಿಗೆ ಗಮನ ಕೊಡುವುದನ್ನು ನಿಲ್ಲಿಸುವಂತೆ ನಾನು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ಅನಧಿಕೃತ ಮೂಲಗಳು ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ವದಂತಿಗಳಿಗೆ ಮೊಹಮ್ಮದ್​ ಶಮಿ ತೆರೆ ಎಳೆದಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯೂ ನವೆಂಬರ್​ 26ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net