PCB ಆಯ್ಕೆಗಾರ ಸ್ಥಾನಕ್ಕೆ ನನ್ನ ರಾಜೀನಾಮೆ! ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಯೂಸಫ್​ ಕೊಟ್ಟ ಕಾರಣವಿದು

Mohammad Yousuf resign
Published on

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ನಲ್ಲಿ ಸದ್ಯ ಯಾವುದು ಸರಿಯಿಲ್ಲ ಅನ್ನೋದು ಕೆಲವು ತಿಂಗಳಿನಿಂದ ಒಂದಲ್ಲ ಒಂದು ಸುದ್ದಿಯಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಬಾಬರ್​ ಆಜಂ ನಾಯಕತ್ವದಲ್ಲಿ ಹೀನಾಯ ಸೋಲು ಕಂಡಿರುವ ಪಾಕ್​ ತಂಡ, ಇದೀಗ ಕೇವಲ ಟಿ20 ಮಾತ್ರವಲ್ಲದೇ ಏಕದಿನ, ಟೆಸ್ಟ್​ ಫಾರ್ಮೆಟ್​ಗಳನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಸದ್ಯ ಈ ಎಲ್ಲಾ ವಿಷಯಗಳಿಂದ ಸಂಪೂರ್ಣವಾಗಿ ತತ್ತರಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (Pakistan Cricket Board)​, ಇತ್ತೀಚೆಗಷ್ಟೇ ಆಯ್ಕೆಗಾರರ ಸಮಿತಿಯಿಂದ ಒಂದಷ್ಟು ಆಯ್ಕೆಗಾರರನ್ನು ತೆಗೆದುಹಾಕಿತ್ತು. ಆದ್ರೆ, ಶಾಕಿಂಗ್ ರೀತಿಯಲ್ಲಿ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಯೂಸಫ್ (Mohammad Yousuf)​ ತಮ್ಮ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ಪಾಕ್ ಕ್ರಿಕೆಟ್​ನಿಂದ ಹೊರಬಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಪಾಕ್ ತಂಡ ನೀಡಿದ ಅತ್ಯಂತ ಕಳಪೆ ಪ್ರದರ್ಶನದಿಂದ ಬೇಸರಗೊಂಡು, ಈ ವೈಫಲ್ಯ ಮುಂದೆ ಮತ್ತೆ ಎದುರಾಗಬಾರದು ಎಂಬ ಕಾರಣಕ್ಕೆ ವಹಾಬ್ ರಿಯಾಜ್ ಮತ್ತು ಅಬ್ದುಲ್ ರಜಾಕ್​ರಿಗೆ ಆಯ್ಕೆಗಾರರ ಸಮಿತಿ ತೊರೆಯುವಂತೆ ಹೇಳಲಾಗಿತ್ತು. ಆದ್ರೆ, ಖುದ್ದಾಗಿ ಮೊಹಮ್ಮದ್​ ಅವರೇ ಆಯ್ಕೆಗಾರರ ಸಮಿತಿಗೆ ರಾಜೀನಾಮೆ ಘೋಷಿಸಿ ಹೊರಬಂದಿರುವುದು ಇದೀಗ ಹಲವರಲ್ಲಿ ಭಾರೀ ಅನುಮಾನ ಮೂಡಿಸಿದೆ.

ರಾಜೀನಾಮೆ ಘೋಷಿಸಲು ಇದೇ ಕಾರಣ

“ನಾನು ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದೇನೆ. ವೈಯಕ್ತಿಕ ಕಾರಣಗಳಿಂದಾಗಿ ನಾನು ಪಿಸಿಬಿಯಿಂದ ಹೊರಬಂದಿದ್ದೇನೆ. ಒಂದೊಳ್ಳೆ ಬಲಿಷ್ಠ ತಂಡಕ್ಕೆ ಸೇವೆ ಸಲ್ಲಿಸಿದ ಖುಷಿ ನನಗಿದೆ. ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆ ಮತ್ತು ತಂಡದ ಯಶಸ್ಸಿಗೆ ಕೊಡುಗೆ ನೀಡಿದ್ದಕ್ಕೆ ಹೆಮ್ಮೆ ಇದೆ. ನಮ್ಮ ಆಟಗಾರರ ಪ್ರತಿಭೆ ಮತ್ತು ಉತ್ಸಾಹದಲ್ಲಿ ನನಗೆ ಅಪಾರ ನಂಬಿಕೆಯಿದೆ. ನಮ್ಮ ಟೀಮ್​ ಯಶಸ್ಸಿನತ್ತ ಮುಂದುವರಿಯಲಿ ಎಂದು ಶುಭ ಹಾರೈಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪತ್ರದ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net