

ನವ ದೆಹಲಿ: ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟ್ಸ್ಮನ್/ವಿಕೆಟ್ ಕೀಪರ್ ರಿಷಬ್ ಪಂತ್ ಜನ್ಮದಿನ ಇಂದು. ಈ ಹಿನ್ನೆಲೆಯಲ್ಲಿ ಎಲ್ಲಡೆಯಿಂದ ಅವರಿಗೆ ಶುಭಾಶಯಗಳು ಹರಿದು ಬರುತ್ತಿವೆ. ಇದೀಗ ಅಭಿಮಾನಿಯೊಬ್ಬರು ಎಡಿಟ್ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಧೋನಿ ನಿವೃತ್ತಿಯ ನಂತರ ಅವರ ಜಾಗವನ್ನು ರಿಷಬ್ ಪಂತ್ ತುಂಬುತ್ತಾರೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯನಾದ್ರೂ, ಪಂತ್ ಟಿ-20 ಹಾಗೂ ಏಕದಿನ ಪಂದ್ಯದಲ್ಲಿ ಮಿಡಲ್ ಆರ್ಡರ್ನಲ್ಲಿ ತನ್ನ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿ ಬಂತು.
ರಿಷಬ್ ಪಂತ್ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡರೂ, ಟೀಕೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಬೇಗನೆ ಔಟ್ ಆಗುವುದು, ಕೆಟ್ಟ ಹೊಡೆತಗಳಿಗೆ ವಿಕೆಟ್ ಒಪ್ಪಿಸುವುದು, ಫಾರ್ಮ್ ಕಾರಣದಿಂದೆಲ್ಲಾ ಟೀಕೆ ಎದುರಿಸುತ್ತಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪಂತ್ ತನ್ನ ಬ್ಯಾಟ್ ಮೂಲಕವೇ ಎಲ್ಲಾ ಟೀಕೆಗಳಿಗೂ ಉತ್ತರಿಸುತ್ತಾ ಬಂದಿದ್ದಾರೆ.
ಮಿಡಲ್ ಆರ್ಡರ್ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದ ಪಂತ್ ಅವರ ಸ್ಥಾನಕ್ಕೆ ಸಮಸ್ಯೆ ಶುರುವಾದ್ದು, ದಿನೇಶ್ ಕಾರ್ತಿಕ್ ಅವರ ಭರ್ಜರಿ ಕಂಬ್ಯಾಕ್ನಿಂದ. ಹೌದು, ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ದಿನೇಶ್ ಕಾರ್ತಿಕ್ ಮತ್ತೆ ಟೀಂ ಇಂಡಿಯಾದ ಬಾಗಿಲು ತಟ್ಟಿದರು. ಆಯ್ಕೆ ಸಮಿತಿಗೆ ಅವರನ್ನು ಆಯ್ಕೆ ಮಾಡದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿತ್ತು.
ದಿನೇಶ್ ಕಾರ್ತಿಕ್ ತಂಡ ಕೂಡಿಕೊಳ್ಳುತ್ತಿದ್ದಂತೆ ರಿಷಬ್ ಪಂತ್ ಅವಕಾಶ ಕಳೆದುಕೊಳ್ಳಲು ಆರಂಭಿಸಿದರು. ಜತೆಗೆ ಬ್ಯಾಟಿಂಗ್ನಲ್ಲೂ ಮಂಕಾದಂತೆ ಕಂಡರು. ಹೀಗಾಗಿ ಟೀಂ ಮ್ಯಾನೇಜ್ಮೆಂಟ್ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ಗೆ ಮಿಡಲ್ ಆರ್ಡರ್ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿತು.
ಇದೀಗ ಅವರ ಜನ್ಮದಿನದಂದು ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಇದ್ದಾರೆ. ರೋಹಿತ್ ಶರ್ಮಾ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ಏನು ಉಡುಗೊರೆ ಬೇಕು ಎಂದು ಕೇಳುತ್ತಾರೆ. ಉಡುಗೊರೆಯಾಗಿ ಬ್ಯಾಟಿಂಗ್ ಎಂದು ರಿಷಬ್ ಪಂತ್ ಹೇಳುತ್ತಾರೆ. ತಮಾಷೆಯಾಗಿ ಕಾಣುವ ಈ ಫೋಟೋವನ್ನು ಎಡಿಟ್ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದನ್ನು ನೋಡಿರುವ ಅಭಿಮಾನಿಗಳು ಕೂಡಾ ಪಂತ್ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.