

ಮಂಗಳೂರು: ಪಿಎಫ್ಐ ಸಂಘಟನೆ ಬ್ಯಾನ್ ಆದ ಹಿನ್ನೆಲೆ,ಇದೀಗ ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆಯ ಮೇಲೆ ಸಂಘಟನೆಯ ಎಚ್ಚರಿಕೆಯ ಬರಹವೊಂದು ಕಾಣಿಸಿದೆ.
ರಸ್ತೆ ಮೇಲೆ 'ಚಡ್ಡಿಗಳೇ ಎಚ್ಚರ -ಪಿಎಫ್ಐ ನಾವು ಮರಳಿ ಬರುತ್ತೇವೆ' ಎಂದು ಬರೆಯಲಾಗಿದೆ. ತಡ ರಾತ್ರಿ ಬಂದು ಈ ಬರಹ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ನೀಡಿದ್ದಾರೆ. ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿ ಅದೇಶ ಹೊರಡಿಸಿತ್ತು. ಜತೆಗೆ ಅದರ ಅಂಗಸಂಸ್ಥೆಗಳನ್ನು ಸಹಿತ ಒಟ್ಟು 8 ಸಂಘಟನೆಗಳನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಹೀಗಾಗಿ ಮತ್ತೆ ನಾವು ಮರಳಿ ಬರುತ್ತೇವೆ ಎಂಬ ಸೂಚನಾ ಬರಹವನ್ನು ಕಿಡಿಗೇಡಿಗಳು ರಸ್ತೆ ಮೇಲೆ ಬರೆದಿದ್ದಾರೆ.