ಮೊದಲ ಬಾರಿಗೆ ಮಗುವಿನ ಮುಖ ರಿವೀಲ್​ ಮಾಡಿದ ಗ್ಲೇನ್​ ಮ್ಯಾಕ್ಸ್​ವೆಲ್​ ದಂಪತಿ

Glenn Maxwell
Published on

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​​ ಮನೆಗೆ ಹೊಸ ಅತಿಥಿಯ ಆಗಮನವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಮ್ಯಾಕ್ಸ್​ವೆಲ್​ ಪತ್ನಿ ವಿನಿ ರಾಮನ್​ ಸೆಪ್ಟೆಂಬರ್​ 11ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಅಂದಿನಿಂದ ಮಗುವಿನ ಫೋಟೋ ಬಹಿರಂಗಪಡಿಸಿರಲಿಲ್ಲ. ಇದೇ ಮೊದಲ ಬಾರಿ ತಮ್ಮ ಮುದ್ದಾದ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಆದರೆ, ಈ ಬಾರಿಯೂ ಮ್ಯಾಕ್ಸ್​ವೆಲ್​ ಅಭಿಮಾನಿಗಳ ನಿರಾಸೆ ಮುಂದುವರಿದಿದೆ.

ಮ್ಯಾಕ್ಸ್​ವೆಲ್​ ಮಗುವನ್ನು ಹಿಡಿದುಕೊಂಡು ತಮ್ಮ ಪತ್ನಿ ವಿನಿ ರಾಮನ್​ ಜತೆ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವನ್ನು ವಿನಿ ರಾಮನ್​ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ನಮ್ಮದು 3 ಜನರ ಕುಟುಂಬವಾಗಿ 10 ದಿನಗಳು ಕಳೆದಿವೆ. ಇದೀಗ ನಿಮಗೆ ವಿದಾಯ ಹೇಳಲು ಕಷ್ಟವಾಗುತ್ತಿದೆ. ಆದರೂ ಇದೊಂದು ರೀತಿಯಲ್ಲಿ ವಿಭಿನ್ನವಾಗಿದೆ. ಮತ್ತೊಂದು ವಿಶ್ವಕಪ್‌ಗಾಗಿ ನೀವು ತೆರಳಿರುವುದಕ್ಕೆ ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಲೋಗನ್ ಮತ್ತು ನಾನು ಮನೆಯಿಂದಲೇ ನಿಮ್ಮನ್ನು ಹುರಿದುಂಬಿಸುತ್ತೇವೆ ಎಂದು ವಿನಿ ರಾಮನ್​ ಬರೆದುಕೊಂಡಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮ್ಯಾಕ್ಸ್​ವೆಲ್​ ಭಾರತಕ್ಕೆ ಆಗಮಿಸಿದ್ದಾರೆ.

ಸೆಪ್ಟೆಂಬರ್ 11 ರಂದು ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ ಸಿಹಿ ಸುದ್ದಿ ಹೊರಬಿದ್ದ ನಂತರ, ವಿನಿ ಮತ್ತು ಮ್ಯಾಕ್ಸ್‌ವೆಲ್ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಕ್ರೀಡಾ ಮತ್ತು ಮನರಂಜನಾಲೋಕದ ಘಟಾನುಘಟಿಗಳು ಮ್ಯಾಕ್ಸಿ ದಂಪತಿಗೆ ಶುಭಕೋರಿದರು.

2017ರಿಂದಲೂ ಡೇಟಿಂಗ್​ ನಡೆಸುತ್ತಿದ್ದ ಜೋಡಿ 2020ರ ಮಾರ್ಚ್​ ತಿಂಗಳಲ್ಲಿ ಮೆಲ್ಬೋರ್ನ್​ನ ಉಪನಗರ ತೋರಕ್​ನಲ್ಲಿ ಮ್ಯಾಕ್ಸಿ ಮತ್ತು ವಿನಿ ನಿಶ್ಚಿತಾರ್ಥ ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು. ಇಬ್ಬರು 2022ರ ಮಾರ್ಚ್​ 17ರಂದು ಭಾರತೀಯ ಸಂಪ್ರದಾಯಂತೆ ಮದುವೆಯಾದರು.

ಅಂದಹಾಗೆ ವಿನಿ ರಾಮನ್​ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್​ ಸೈನ್ಸ್​ ವಿಭಾಗದಲ್ಲಿ ಮೆಂಟನ್​​ ಗರ್ಲ್ಸ್​ ಸೆಕೆಂಡರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಮೆಲ್ಬೋರ್ನ್​ನಲ್ಲಿ ಫಾರ್ಮಸಿಸ್ಟ್​ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ವಿನಿ ರಾಮನ್​ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದು, ವಿನಿ ಅಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net