

ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆಯಾಗದಿರುವ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹಾರ್ದಿಪ್ ಪಾಂಡ್ಯ ಹೊಸ ಚರ್ಚಾ ವಿಷಯವಾಗಿದ್ದಾರೆ. ಏಕೆಂದರೆ ಟಿ20 ವಿಶ್ವಕಪ್ ಮುಗಿದ ಬಳಿಕ ರೋಹಿತ್ ಶರ್ಮ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ್ದು, ಹಾರ್ದಿಕ್ನನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಸೂರ್ಯಕುಮಾರ್ಗೆ ಮಣೆ ಹಾಕಿದ ಬಿಸಿಸಿಐ ಹಾರ್ದಿಕ್ಗೆ ನಿರಾಸೆ ಮೂಡಿಸಿತ್ತು.
ಹಾರ್ದಿಕ್ಗೆ ನಾಯಕತ್ವ ವಹಿಸದೆ ಇರಲು ಫಿಟ್ನೆಸ್ ಮುಖ್ಯ ಕಾರಣ ಎಂದು ಹೇಳಲಾಗಿದ್ದು, ಹಾರ್ದಿಕ್ಗೆ ದೇಶೀಯ ಟೂರ್ನಿಗಳಲ್ಲಿ ಹೆಚ್ಚಾಗಿ ಆಡುವಂತೆ ಬಿಸಿಸಿಐ ಸಲಹೆ ನೀಡಿದೆ. ಇನ್ನೂ ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದದ್ದು, ಹಾರ್ದಿಕ್ ಪಾಂಡ್ಯಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ, ಆತ ನಿರಂತರವಾಗಿ ಆಟವಾಡಬೇಕೆಂದು ನಾನು ಭಾವಿಸುತ್ತೇನೆ. ಏಕೆಂದರೆ ನನ್ನ ಪ್ರಕಾರ ಪಂದ್ಯದ ಫಿಟ್ನೆಸ್ ಬಹಳ ಮುಖ್ಯ ಹಾಗಾಗಿ ಯಾವುದೇ ಮಾದರಿಯ ಕ್ರಿಕೆಟ್ ಇರಲಿ ಎಷ್ಟು ಸಾಧ್ಯವಾಗುತ್ತದೋ ಹಾರ್ದಿಕ್ ಅಷ್ಟು ಆಡಿದೆ ಮುಖ್ಯ. ಅತ ಇದಷ್ಟರ ಮೇಲೆ ಫೋಕಸ್ ಮಾಡಿದರೆ ಸಾಕು.
ಆತ ಫಿಟ್ ಆಗಿದ್ದಾನೆ ಎಂದೆನಿಸಿದರೆ ಏಕದಿನ ತಂಡಕ್ಕೆ ವಾಪಸ್ ಆಗಲಿದ್ದಾನೆ. ಏಕೆಂದರೆ ಏಕದಿನ ಮಾದರಿಯಲ್ಲಿ 10 ಓವರ್ಗಳನ್ನು ಬೌಲ್ ಮಾಡಬೇಕಾಗುತ್ತದೆ. ಬೌಲಿಂಗ್ ಮಾಡಿದ ರೀತಿಯೂ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಫಿಟ್ ಆಗಿದ್ದರೆ ಮಾತ್ರ ಇದೆಲ್ಲಾ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಹಾರ್ದಿಕ್ ಖಂಡಿತವಾಗಿಯೂ ಏಕದಿನ ಮಾದರಿಯಲ್ಲೂ ಆಡಲಿದ್ದಾರೆ ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.