

ಪ್ಯಾರಿಸ್: ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ಆತಿಥ್ಯದಲ್ಲಿ ಜುಲೈ 26ರಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದ್ದು, 33ನೇ ಆವೃತ್ತಿಯ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ 206 ದೇಶಗಳ 14,250 ಕ್ರೀಡಾಪಟುಗಳು ಭಾಗಿಯಾಗುತ್ತಿದ್ದು, ಇದೀಗ ಈಜೆಪ್ಟ್ನ ಫೆನ್ಸರ್ ಒಬ್ಬರು ಕಣದಲ್ಲಿದ್ದು, ಇವರು ಏಳು ತಿಂಗಳ ಗರ್ಭಿಣಿಯೆಂದು ತಿಳಿದು ಬಂದಿದೆ.
ಇದು ಈಜಿಪ್ಟ್ನ ಫೆನ್ಸರ್ ನಾಡಾ ಹಫೀಜ್ ಅವರ ಸಾಹಸಗಾಥೆ. 26 ವರ್ಷದ ನಾಡಾ ಹಫೀಜ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗಿಯಾಗುತ್ತಿದ್ದು, ಇವರು 7 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ವಿಚಾರ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಸೋಮವಾರ ಮಹಿಳೆಯರ ಸೇಬರ್ನಲ್ಲಿ 16ರ ಘಟ್ಟದಿಂದ ನಿರ್ಗಮಿಸಿದ ನಂತರ ಈ ಬಗ್ಗೆ ಈಜಿಪ್ಟ್ ಆಟಗಾರ್ತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಾನು ಮತ್ತು ನನ್ನ ಮಗು ಸವಾಲುಗಳ ನ್ಯಾಯಯುತ ಪಾಲನ್ನು ಹೊಂದಿದ್ದೇವೆ, ಅದು ದೈಹಿಕ ಮತ್ತು ಭಾವನಾತ್ಮಕ. ಗರ್ಭಧಾರಣೆಯ ನಂತರ ಜೀವನ ಕಠಿಣವಾಗಿದೆ ಮತ್ತು ಇದರ ಜೊತೆಗೆ ಕ್ರೀಡೆ ಆಡುವುದು ನನ್ನ ಪ್ರಕಾರ ಶ್ರಮದಾಯಕವಲ್ಲ. ನಾನು ಫೆನ್ಸಿಂಗ್ನಲ್ಲಿ 16ರ ಘಟ್ಟ ತಲುಪಿದ್ದು, ಖುಷಿ ನೀಡಿದ್ದು, ಪುಟ್ಟ ಒಲಿಂಪಿಯನ್ಅನ್ನು ಹೊತ್ತೊಯ್ಯುತ್ತಿದ್ದೇನೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಪೋಸ್ಟ್ ಹಾಕುತ್ತಿದ್ದೇನೆ ಎಂದು ನಾಡಾ ಹಫೀಜ್ ಬರೆದುಕೊಂಡಿದ್ದಾರೆ.
ವೈದ್ಯಕೀಯದಲ್ಲಿ ಪದವಿ ಹೊಂದಿರುವ ಮಾಜಿ ಜಿಮ್ನಾಸ್ಟ್, ಹಫೀಜ್ ಮೂರು ಬಾರಿ ಒಲಿಂಪಿಯನ್ ಆಗಿದ್ದು, ಅವರು 2019 ಆಫ್ರಿಕನ್ ಗೇಮ್ಸ್‌ನಲ್ಲಿ ವೈಯಕ್ತಿಕ ಮತ್ತು ತಂಡದ ಸೇಬರ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.