

ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಡಬಲ್ ಕಂಚಿನ ಪದಕ ಪಡೆದ ಶೂಟರ್ ಮನು ಭಾಕರ್ ಭಾರತಕ್ಕೆ ಮರಳಿದ್ದು, ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಒಲಿಂಪಿಕ್ಸ್ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.
ಮನು ಭಾಕರ್ ಪೋಷಕರಾದ ರಾಮ್ ಕಿಶನ್ ಹಾಗೂ ಸುಮೇಧಾ ಉತ್ತರಾಖಂಡದ ಅಧಿಕಾರಿಗಳು, ಕ್ರೀಡಾ ಪ್ರೇಮಿಗಳು, ವೈಯಕ್ತಿಕ ಕೋಚ್ ಜಸ್ಪಾಲ್ ರಾಣಾ ಸೇರಿದಂತೆ 100ಕ್ಕೂ ಅಧಿಕ ಮಂದಿ ತುಂತುರು ಮಳೆಯಲ್ಲೇ ಡೋಲು ಬಾರಿಸಿ, ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುವ ಮೂಲಕ ಭರ್ಜರಿ ಸ್ವಾಗತ ನೀಡಿದರು. ಮನು ಭಾಕರ್ ಹಾಗೂ ಅವರ ಕೋಚ್ ಇದ್ದ ಪೋಸ್ಟರ್ಗಳನ್ನು ಹಿಡಿದು ಜನ ಘೋಷಣೆ ಕೂಗಿದರು.
ಮಹಿಳೆಯರ 10 ಮೀಟರ್ ಏರ್ ಶೂಟರ್ ಸ್ವರ್ಧೆಯಲ್ಲಿ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತದ ಖಾತೆಯನ್ನು ತೆರೆದರು. ನಂತರ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಕಂಚಿನ ಪದಕವನ್ನು ಗೆದಿದ್ದಾರೆ. 25ಮೀ ಏರ್ಪಿಸ್ತೂಲ್ ವಿಭಾಗದಲ್ಲಿ ಅವರು ಹ್ಯಾಟ್ರಿಕ್ ಪದಕ ಸಾಧಿಸುವ ಕನಸು ಸ್ವಲ್ಪದರಲ್ಲೇ ಭಗ್ನಗೊಂಡಿತ್ತು.