ಐಸಿಸಿ ಚೇರ್ಮನ್ ಹುದ್ದೆಯಿಂದ ಕೆಳಗಿಳಿದ ಶಶಾಂಕ್

shashank manohar for web12
Published on

ದುಬೈ: ಕಳೆದ ನಾಲ್ಕೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಚೇರ್ಮನ್ ಆಗಿದ್ದ ಭಾರತದ ಶಶಾಂಕ್ ಮನೋಹರ್ ಬುಧವಾರ ಕೆಳಗಿಳಿದಿದ್ದಾರೆ. ಹಾಲಿ ಡೆಪ್ಯೂಟಿ ಚೇರ್ಮನ್ ಸಿಂಗಾಪುರದ ಇಮ್ರಾನ್ ಖ್ವಾಜ ಹಂಗಾಮಿ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ. ನವೆಂಬರ್ 2015ರಲ್ಲಿ ಶಶಾಂಕ್ ಮನೋಹರ್, ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಶಶಾಂಕ್ ಮನೋಹರ್ ತಲಾ 2 ವರ್ಷಗಳ ಅಧಿಕಾರ ಅವಧಿಯ ಹುದ್ದೆಯನ್ನು 2 ಬಾರಿ ನಿಭಾಯಿಸಿದ್ದರು. ಮುಂದಿನ ಚೇರ್ಮನ್ ಆಯ್ಕೆಯಾಗುವರೆಗೂ ಸಿಂಗಾಪುರ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆದ ಇಮ್ರಾನ್ ಖ್ವಾಜ ಹಂಗಾಮಿ ಚೇರ್ಮನ್ ಆಗಿ ಮುಂದುವರಿಯಲಿದ್ದಾರೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಮುಂದೂಡಿಕೆಗೆ ಸೂಕ್ತ ನಿರ್ಧಾರ ಕೈಗೊಳ್ಳದೆ, ಅನಾವಶ್ಯಕವಾಗಿ ಸಭೆ ಮುಂದೂಡುತ್ತಾ ಬಿಸಿಸಿಐಗೆ ಯೋಜನೆಗಳಿಗೆ ಶಶಾಂಕ್ ತಡೆಗೋಡೆಯಾಗಿದ್ದರು. ಟಿ20 ವಿಶ್ವಕಪ್ ಮುಂದೂಡಿದರೆ, ಅದೇ ಸಮಯದಲ್ಲಿ 13ನೇ ಆವೃತ್ತಿಯ ಐಪಿಎಲ್ ಆಯೋಜಿಸುವ ಕನಸಿನಲ್ಲಿರುವ ಮಂಡಳಿಗೆ ಶಶಾಂಕ್ ಅಡ್ಡಿಯಾಗಿದ್ದರು. ಇದೀಗ ಶಶಾಂಕ್ ನಿರ್ಗಮನದಿಂದಾಗಿ ಬಿಸಿಸಿಐನ ಕೆಲವೊಂದು ಯೋಜನೆಗಳು ಕೈಗೂಡುವ ಸಾಧ್ಯತೆಗಳಿವೆ. ಐಸಿಸಿ ನಿಯಮದನ್ವಯ ಶಶಾಂಕ್ ಮತ್ತೊಂದು ಅವಧಿಗೆ ಮುಂದುವರಿಯುವ ಅವಕಾಶವಿತ್ತು. ಐಸಿಸಿಯಲ್ಲಿ ಸತತ ಮೂರು ಅವಧಿಗೆ ಅಧ್ಯಕ್ಷರಾಗುವ ನಿಯಮವಿದೆ.

ನಾಗ್ಪುರ ಮೂಲದ 62 ವರ್ಷದ ವಕೀಲರಾಗಿರುವ ಶಶಾಂಕ್ 2008 ರಿಂದ 2011ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ನೂತನ ಚೇರ್ಮನ್ ಆಯ್ಕೆ ಪ್ರಕ್ರಿಯೆ ಕುರಿತು ಐಸಿಸಿ ಮುಂದಿನ ವಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಇಮ್ರಾನ್ ಖ್ವಾಜ ಕೂಡ ಚೇರ್ಮನ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಮುಂದಿನ ಚೇರ್ಮನ್ ಸ್ಥಾನಕ್ಕೆ ಈಗಾಗಲೆ ಇಂಗ್ಲೆಂಡ್‌ನ ಕಾಲಿನ್ ಗ್ರೇವ್ಸ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೆಸರು ರೇಸ್‌ನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net