

MS Dhoni: ನಿನ್ನೆ (ಏ.25) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 5 ವಿಕೆಟ್ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿತು. ಆದರೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಧೋನಿ ಪಡೆ, ಗೆಲುವಿಗಾಗಿ ಹೆಣಗಾಡುತ್ತಿದ್ದು, ಇದೀಗ ಪ್ಲೇಆಫ್ ಕನಸ್ಸಿನಿಂದ ಬಹಳ ದೂರ ಸರಿದಿದೆ.
ಈ ಸೀಸನ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಒಟ್ಟು 7 ಸೋಲು ದಾಖಲಿಸಿರುವ ಚೆನ್ನೈ ಪಡೆ, ಕೇವಲ ಎರಡೇ ಎರಡು ಪಂದ್ಯವನ್ನು ಮಾತ್ರ ಗೆದ್ದು ಬೀಗಿದೆ. ಈಗಾಗಲೇ ಪ್ಲೇಆಫ್ ಆಸೆಗೆ ಎಳ್ಳು-ನೀರು ಬಿಟ್ಟಿರುವ ಸಿಎಸ್‌ಕೆ, ಇನ್ನೂ ಐದು ಪಂದ್ಯಗಳನ್ನು ಆಡಬೇಕಿದೆ. ಇದರಲ್ಲಿ ಐದಕ್ಕೆ ಐದು ಗೆದ್ದರೂ ಪ್ಲೇಆಫ್ಗೆ ಎಂಟ್ರಿ ಕೊಡುವುದು ಬಹುತೇಕ ಅನುಮಾನ.
ಮೊದಲು ಟಾಸ್ ಗೆದ್ದು ಬೌಲಿಂಗ್ ಮಾಡಿದ ಎಸ್‌ಆರ್‌ಎಚ್, ಸಿಎಸ್‌ಕೆ ತಂಡವನ್ನು ಆಲ್ಔಟ್ ಮಾಡುವ ಮೂಲಕ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿತು. 10 ವಿಕೆಟ್ ನಷ್ಟಕ್ಕೆ ಕೇವಲ 154 ರನ್ ಕಲೆಹಾಕಲಷ್ಟೇ ಧೋನಿ ಪಡೆ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಎಸ್ಆರ್ಚ್, ಬಹಳ ಸುಲಭವಾಗಿ ಧೋನಿ ಪಡೆಯನ್ನು ಅವರ ತವರಿನಲ್ಲೇ ಮಣಿಸಿತು.
19.5 ಓವರ್‌ಗಳಲ್ಲಿ 154 ರನ್ಗೆ ಆಲೌಟ್ ಆದ ಸಿಎಸ್‌ಕೆ ಪರ ಡೆವಾಲ್ಡ್ ಬ್ರೆವಿಸ್ (42 ರನ್, 25 ಎಸೆತ, 1 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನಡೆಸಿದರು. ಎಸ್‌ಆರ್‌ಎಚ್ ಪರ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಕಮ್ಮಿನ್ಸ್ ಮತ್ತು ಜಯದೇವ್ ಉನದ್ಕತ್ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಮಿ ಮತ್ತು ಕಮಿಂಡು ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು. ಇನ್ನು ಎಸ್‌ಆರ್‌ಎಚ್ ವಿರುದ್ಧವೂ ಸೋತ ಬಳಿಕ ಮಾತನಾಡಿದ ಧೋನಿ, ನಮ್ಮ ತಂಡದ ಬ್ಯಾಟಿಂಗ್ ವೈಫಲ್ಯದಿಂದ ನಾವು ಸೋತೆವು ಎಂದರು.
"ಆಡಿದ ರೀತಿ ಚೆನ್ನಾಗಿರಲಿಲ್ಲ. ಬಹುಶಃ ಇನ್ನೂ 15ರಿಂದ 20 ರನ್ ಗಳಿಸಿದ್ದರೆ, ಪಂದ್ಯ ಮತ್ತಷ್ಟು ಕಠಿಣವಾಗಿರುತ್ತಿತ್ತು. ನಾವು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. 155 ರನ್‌ಗಳ ಸ್ಕೋರ್ ಇಲ್ಲಿಗೆ ಸಾಲುವುದಿಲ್ಲ. ಕಾರಣ, ಪಿಚ್ ಟರ್ನಿಂಗ್ ವಿಕೆಟ್ ಅಲ್ಲ. ಆದ್ದರಿಂದ ಈ ಸ್ಕೋರ್ ಬಹಳ ಕಡಿಮೆಯಾಯಿತು. ನಾವು ಇನ್ನೂ ಕೆಲವು ರನ್‌ಗಳನ್ನು ಗಳಿಸಿದ್ದರೆ ಉತ್ತಮವಾಗಿರುತ್ತಿತ್ತು. ಡೆವಾಲ್ಡ್ ಬ್ರೆವಿಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇನ್ನೂ ಜವಾಬ್ದಾರಿಯನ್ನು ತೆಗೆದುಕೊಂಡು ಆಡಬೇಕಾಗಿದೆ. ಅವರು ಸ್ಪಿನ್ನರ್‌ಗಳ ವಿರುದ್ಧ ದಾಳಿ ನಡೆಸಬೇಕು" ಎಂದು ಹೇಳಿದರು.
"ಇಲ್ಲಿ ನಾನು 180ರಿಂದ 200 ರನ್ ಕಲೆಹಾಕಬೇಕು ಎಂದು ಹೇಳುವುದಿಲ್ಲ, ಆದರೆ, ನಾವು ಪರಿಸ್ಥಿತಿಯನ್ನು ಸ್ವಲ್ಪ ನಿರ್ಣಯಿಸಿ ಅದಕ್ಕೆ ತಕ್ಕಂತೆ ಆಡುವುದು ಒಳಿತು. ನಮ್ಮ ಬೌಲರ್ಗಳು ಉತಮ ಬೌಲಿಂಗ್ ಪ್ರದರ್ಶನ ನೀಡಿದರು. ತಂಡದ ಹೆಚ್ಚಿನ ಆಟಗಾರರು ಪ್ರದರ್ಶನ ನೀಡದಿದ್ದರೆ, ಅದು ತುಂಬಾ ಕಷ್ಟಕರ. ಖಂಡಿತವಾಗಿಯೂ ತಂಡದಲ್ಲಿ ಬದಲಾವಣೆಗಳ ಅವಶ್ಯಕತೆಯಿದೆ. ತಂಡವು ಯಶಸ್ಸನ್ನು ಸಾಧಿಸುತ್ತಿದ್ದರೆ ಚೆನ್ನಾಗಿ ಆಡದ ಆಟಗಾರರಿಗೆ ಇನ್ನೂ ಒಂದಷ್ಟು ಅವಕಾಶಗಳನ್ನು ನೀಡಬಹುದು. ಆದರೆ, ಬಹುತೇಕ ಆಟಗಾರರು ಪ್ರದರ್ಶನ ನೀಡಲಿಲ್ಲ ಎಂದಾಗ ಅಲ್ಲಿ ಬದಲಾವಣೆಯ ಅವಶ್ಯಕತೆ ಹೆಚ್ಚುತ್ತದೆ. ಈಗಾಗಲೇ ಆಟ ಬಹಳಷ್ಟು ಬದಲಾಗಿದೆ" ಎಂದು ಧೋನಿ ಹೇಳಿದ್ದಾರೆ,(ಏಜೆನ್ಸೀಸ್).