

Vaibhav Suryavanshi: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾಗಿ ಪದಾರ್ಪಣೆ ಮಾಡಿರುವ 14 ವರ್ಷದ ವೈಭವ್ ಸೂರ್ಯವಂಶಿ, ಆಡಿದ ಎರಡು ಪಂದ್ಯಗಳಲ್ಲಿ ಅದ್ಭುತ ಓಪನಿಂಗ್ ನೀಡಿದ ರೀತಿಗೆ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ವೈಭವ್, ಮೊದಲ ಬಾಲ್ನಲ್ಲೇ ಸಿಕ್ಸರ್ ಬಾರಿಸಿದ ರೀತಿ ನೋಡುಗರನ್ನು ಅಚ್ಚರಿಗೆ ದೂಡಿತು. ಡೆಬ್ಯೂ ಮ್ಯಾಚ್ನಲ್ಲಿಯೇ ಮೊದಲ ಬಾಲ್ಗೆ ಸಿಕ್ಸರ್ ಬಾರಿಸಿ, ಟಿ20 ಲೀಗ್ನಲ್ಲಿ ಹೆಸರು ದಾಖಲಿಸಿದ ಕೆಲವೇ ಕೆಲವು ಆಟಗಾರರಲ್ಲಿ ವೈಭವ್ ಕೂಡ ಒಬ್ಬರಾಗಿದ್ದಾರೆ. ಎಲ್ಎಸ್ಜಿ ವಿರುದ್ಧ 20 ಎಸೆತ ಎದುರಿಸಿದ ವೈಭವ್ 34 ರನ್ ಕಲೆಹಾಕಿದರು. ಇನ್ನೂ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಎರಡು ಸಿಕ್ಸರ್ ಬಾರಿಸಿ ವಿಕೆಟ್ ಒಪ್ಪಿಸಿದ ಸೂರ್ಯವಂಶಿ, ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರರಾದರು.
14 ವರ್ಷ ವಯಸ್ಸಿನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುತ್ತಿರುವ ಯುವ ಬ್ಯಾಟರ್ಗೆ ಹಲವರು ಮೆಚ್ಚುಗೆ ನೀಡಿದರೆ, ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಎಚ್ಚರಿಕೆ ನೀಡಿದ್ದಾರೆ. "ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿ ಕಣ್ಮರೆಯಾದವರು ಅನೇಕರಿದ್ದಾರೆ. ಹೀಗಿರುವಾಗ ವೈಭವ್ ತನ್ನ ಕರಿಯರ್ ಬಗ್ಗೆ ಬಹಳ ಸೂಕ್ಷ್ಮವಾಗಿ ನಿರ್ಧರಿಸಬೇಕು. ಒಂದು ಸಿಕ್ಸ್ ಬಾರಿಸಿದ ತಕ್ಷಣ ತೀರ ಉತ್ಸಾಹಕ್ಕೆ ಒಳಗಾಗಬಾರದು ಮತ್ತು ದೊಡ್ಡದು ಸಾಧಿಸಿದೆ ಎಂಬ ಖುಷಿಯಲ್ಲಿ ತೇಲಾಡಬಾರದು" ಎಂದಿದ್ದಾರೆ.
"ವೈಭವ್ ಅವರ ಗುರಿ ಹೇಗಿರಬೇಕು ಎಂದರೆ ಮುಂದಿನ 20 ವರ್ಷ ಐಪಿಎಲ್ನಲ್ಲಿ ಆಡುವಂತೆ ಪ್ಲಾನ್ ಮಾಡಿಕೊಳ್ಳಬೇಕು. ವಂಶಿಗೆ ವಿರಾಟ್ ಅದ್ಭುತ ನಿದರ್ಶನ. 19ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಕೊಹ್ಲಿ, ಇಂದು 18 ಐಪಿಎಲ್ ಆವೃತ್ತಿ ಆಡಿದ್ದಾರೆ. ಕೊಹ್ಲಿಯಂತೆ ವೈಭವ್ ಸಹ ಬೆಳೆಯಬೇಕು" ಎಂದು ಹೇಳಿದ್ದಾರೆ,(ಏಜೆನ್ಸೀಸ್).