

CSK vs SRH: ನಿನ್ನೆ (ಏ.25) ಚೆಪಾಕ್ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 5 ವಿಕೆಟ್ಗಳ ಸುಲಭ ಜಯ ದಾಖಲಿಸಿತು.
ಮೊದಲು ಟಾಸ್ ಗೆದ್ದು ಬೌಲಿಂಗ್ ಮಾಡಿದ ಎಸ್ಆರ್ಎಚ್, ಸಿಎಸ್ಕೆ ತಂಡವನ್ನು ಆಲ್ಔಟ್ ಮಾಡುವ ಮೂಲಕ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿತು. 10 ವಿಕೆಟ್ ನಷ್ಟಕ್ಕೆ ಕೇವಲ 154 ರನ್ ಕಲೆಹಾಕಲಷ್ಟೇ ಧೋನಿ ಪಡೆ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಎಸ್ಆರ್ಚ್, ಬಹಳ ಸುಲಭವಾಗಿ ಧೋನಿ ಪಡೆಯನ್ನು ಅವರ ತವರಿನಲ್ಲೇ ಮಣಿಸಿತು. ಈ ಮೂಲಕ ತಮ್ಮ ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿತು.
ಇಲ್ಲಿಯವರೆಗೆ ಆಡಿರುವ 9 ಪಂದ್ಯಗಳಲ್ಲಿ ಒಟ್ಟು 7 ಪಂದ್ಯಗಳನ್ನು ಸೋತಿರುವ ಸಿಎಸ್ಕೆ, ಕೇವಲ 2 ಪಂದ್ಯ ಮಾತ್ರ ಗೆದ್ದಿದೆ. ಇದು ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿದ ತಂಡಕ್ಕೆ ಪ್ಲೇಆಫ್ ಕನಸನ್ನು ಬಹುತೇಕ ಭಗ್ನಗೊಳಿಸಿದೆ. ಆದರೂ ಸಹ ಇನ್ನೂ ಅವಕಾಶವಿದೆ ಎಂಬುದು ಇಲ್ಲಿ ಗಮನಾರ್ಹ.
ಇನ್ನು ಬಾಕಿ ಉಳಿದಿರುವ 5 ಪಂದ್ಯವನ್ನು ಸತತವಾಗಿ ಗೆದ್ದು ಬೀಗಿದರೆ, ಟಾಪ್ 4ರಲ್ಲಿ ಸಿಎಸ್ಕೆಗೆ ಸ್ಥಾನ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಅದು ಇತರೆ ತಂಡಗಳ ಪ್ರದರ್ಶನದ ಆಧಾರದ ಮೇಲೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. 18ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಸಿಎಸ್ಕೆ, ಐಪಿಎಲ್ ಇತಿಹಾಸದಲ್ಲೇ ಈ ಮಟ್ಟಿಗಿನ ಕಳಪೆ ಆಟ ಎಂದಿಗೂ ಆಡಿರಲಿಲ್ಲ ಎಂಬ ಸಂಗತಿ ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಅರಗಿಸಿಕೊಳ್ಳಲಾಗದ ಸಂಗತಿ ಎಂದೇ ಹೇಳಬಹುದು,(ಏಜೆನ್ಸೀಸ್).