

ನವದೆಹಲಿ: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಪಿಸಿಬಿ ಈ ಹಿಂದೆಯೇ ಬಿಸಿಸಿಐಗೆ ಒತ್ತಾಯಿಸಿತ್ತು. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಪಾಕ್ಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿತ್ತು.
ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ವೈಭವದ ಮೊಸರು ಕುಡಿಕೆ
ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್ ಇನ್ ಬ್ಲ್ಯೂ ಪಡೆಯನ್ನು ಲಾಹೋರ್ಗೆ ಕರೆತರುವ ಪಾಕ್ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ. ಈ ಎಲ್ಲಾ ವಿಚಾರಗಳಿಂದ ಕಂಗೆಟ್ಟಿದ್ದ ಪಾಕ್ಗೆ ಇದೀಗ ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎನುವಂತೆ ಜಯ್ ಷಾ ಅವರ ನೂತನ ಹುದ್ದೆ. ಬಿಸಿಸಿಐನಿಂದ ಪ್ರಮೋಷನ್ ಪಡೆದ ಷಾ, ಇದೀಗ ಐಸಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಯ್ ಷಾ ಆಯ್ಕೆಯಾದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮೊದಲು ಕಾಡಿದ್ದು ತಲೆನೋವು. ಕಾರಣ, ಈ ಹಿಂದೆಯೇ ನಿಮ್ಮ ನೆಲಕ್ಕೆ ಭಾರತ ಬರುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದ್ದು ಇದೇ ಜಯ್ ಷಾ. ಆದ್ರೆ, ಈಗ ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ತಮ್ಮ ಬಯಕೆ ಈಡೇರುತ್ತದೆಯೋ ಇಲ್ಲವೋ ಎಂಬ ಭಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಆವರಿಸಿಕೊಂಡಿದೆ. ಆದ್ರೆ, ಒಂದೆಡೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಖಂಡಿತ ಲಾಹೋರ್ಗೆ ಭಾರತ ಬರಲಿದೆ, ಅದನ್ನು ಷಾ ಅವರೇ ನೆರವೇರಿಸಲಿದ್ದಾರೆ ಎಂದು ಪಾಕ್ನ ಮಾಜಿ ಆಟಗಾರ ಯೂನಿಸ್ ಖಾನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇದೆಲ್ಲವೂ ಒಂದೆಡೆಯಾದರೆ, ಸೆಲೆಬ್ರಿಟಿಗಳ ನಿವ್ವಳ ಆಸ್ತಿಯಂತೆ ಜಯ್ ಕೂಡ ಎಷ್ಟು ಆಸ್ತಿ ಗಳಿಸಿರಬಹುದು ಎಂಬ ಕುತೂಹಲ ಹಲವರಲ್ಲಿ ಕಾಡಿತ್ತು. ಕಡೆಗೂ ಇದಕ್ಕೆ ಉತ್ತರ ಸಿಕ್ಕಿದ್ದು, ಷಾ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟಿದೆ ಎಂಬುದು ಇದೀಗ ಕ್ರಿಕೆಟ್ ಅಭಿಮಾನಿಗಳ ಎದುರು ಬಹಿರಂಗವಾಗಿದೆ. ವರದಿಗಳ ಪ್ರಕಾರ, 2024ರಲ್ಲಿ ಜಯ್ ಶಾ ಅವರ ನಿವ್ವಳ ಮೌಲ್ಯ ಸುಮಾರು 124 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 35 ವರ್ಷ ವಯಸ್ಸಿನ ಜಯ್, 2009ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಕ್ರಿಕೆಟ್ ಅಹಮದಾಬಾದ್ನಲ್ಲಿ (ಸಿಬಿಸಿಎ) ಕೆಲಸ ಪಡೆಯುವ ಮೂಲಕ ತಮ್ಮ ಪಯಣ ಆರಂಭಿಸಿದರು. ಷಾ ಅವರ ಈ ಬೆಳವಣಿಗೆ ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗುವ ಮುನ್ಸೂಚನೆಯನ್ನು ಕೊಟ್ಟಿದೆ ಎಂದರೆ ತಪ್ಪಾಗಲಾರದು.
ಪ್ರಸ್ತುತ ಐಸಿಸಿ ನೂತನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಜಯ್ ಷಾ ಅವರು ಈ ವರ್ಷದ ಡಿಸೆಂಬರ್ 1ರಿಂದ ತಮ್ಮ ಜವಾಬ್ದಾರಿಯನ್ನು ಹೊತ್ತು ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಉನ್ನತ ಹುದ್ದೆಗೆ ನೇಮಕಗೊಂಡ ಜಯ್ ಶಾ ಅವರಿಗೆ ಇದೀಗ ದೇಶವ್ಯಾಪಿ ಅಭಿನಂದನೆಗಳು ಹರಿದುಬಂದಿದ್ದು, ರಾಜಕೀಯ ಗಣ್ಯರು ಸೇರಿದಂತೆ ಸ್ಟಾರ್ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).