

ಬೆಂಗಳೂರು: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ತನ್ನ ಪಾರುಪತ್ಯವನ್ನು ಮೆರೆಯುತ್ತಿದೆ. ಸತತ ಮೂರು ಜಯ ಸಾಧಿಸಿರುವ ರೋಹಿತ್ ಶರ್ಮ ಪಡೆ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್-8ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇಂದು (ಜೂನ್ 15) ಕೆನಡಾ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ. ಇದು ನಾಮಪಾತ್ರ ಪಂದ್ಯವಾಗಿದ್ದು, ಹಲವು ಬದಲಾವಣೆಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಕಳೆದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಅಷ್ಟೊಂದು ಉತ್ತಮವಾಗಿ ಕಾಣಲಿಲ್ಲ. ಆದರೆ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ಇತರ ಬೌಲರ್‌ಗಳು ಮಿಂಚಿದ ಕಾರಣ ತಂಡವು ಗೆಲುವು ಸಾಧಿಸಿದೆ. ಸತತವಾಗಿ ಗೆದ್ದರು ಕೂಡ ಟಾಪ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ವೈಫಲ್ಯವು ಎಲ್ಲರನ್ನೂ ಚಿಂತೆಗೀಡುಮಾಡಿದೆ. ಕಿಂಗ್ ಮತ್ತೆ ಫಾರ್ಮ್ಗೆ ಮರಳುತ್ತಾರಾ ಎಂಬುದೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ, ಸೂಪರ್-8 ಹಾಗೂ ನಾಕೌಟ್ ಹಂತ ಮುಂದಿರುವುದರಿಂದ ಕೊಹ್ಲಿ ಹೇಗೆ ಆಡುತ್ತಾರೆ ಎಂಬುದು ಕುತೂಹಲ ಎಲ್ಲರಲ್ಲೂ ಮೂಡಿಸಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಪ್ರತಿಕ್ರಿಯಿಸಿದ್ದಾರೆ.
ಪಿಂಚ್ ಹಿಟ್ಟರ್ ರಿಷಭ್ ಪಂತ್ಗಾಗಿ ವಿರಾಟ್ ಕೊಹ್ಲಿ ತ್ಯಾಗ ಮಾಡುವ ಸಮಯ ಇದೀಗ ಬಂದಿದೆ. ಆರಂಭಿಕ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತೆರಳುವಂತೆ ಕೊಹ್ಲಿಗೆ ಶ್ರೀಶಾಂತ್ ಸಲಹೆ ನೀಡಿದರು. ಅಗತ್ಯವಿದ್ದರೆ, ಪಂತ್ ಅವರನ್ನು ಅಗ್ರಸ್ಥಾನದಲ್ಲಿ ಹೆಚ್ಚು ಆಡಿಸಬೇಕು ಮತ್ತು ಅದಕ್ಕಾಗಿ ಕೊಹ್ಲಿ ತನ್ನ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧರಾಗಿರಬೇಕು. ರಿಷಭ್ ಪಂತ್ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಅವರು ವಿವಿಧ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದ್ದೇವೆ. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ಅನುಕೂಲವಾಗುತ್ತದೆ ಎಂದು ಶ್ರೀಶಾಂತ್ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವೇಗಿ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಬಗ್ಗೆಯೂ ಶ್ರೀಶಾಂತ್ ಪ್ರತಿಕ್ರಿಯಿಸಿದ್ದಾರೆ. ಹಾರ್ದಿಕ್ ಅವರು ಪಾರ್ಟ್‌ಟೈಮರ್‌ನಂತೆ ಅಲ್ಲ, ಮುಖ್ಯ ವೇಗಿಗಳ ಮಟ್ಟದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿಧಾನ ಬೌನ್ಸರ್‌ಗಳನ್ನು ಬೌಲ್ ಮಾಡಿದ ರೀತಿಯನ್ನು ಶ್ಲಾಘಿಸಿದರು. ಆಸ್ಟ್ರೇಲಿಯ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ನಿರ್ವಹಿಸುತ್ತಿರುವ ಪಾತ್ರವನ್ನೇ ಹಾರ್ದಿಕ್ ನಿರ್ವಹಿಸುತ್ತಿದ್ದಾರೆ ಎಂದರು.
ಬೌಲರ್ ಹಾಗೂ ಆಲ್ ರೌಂಡರ್ ಆಗಿ ನಿರ್ಣಾಯಕ ಸಮಯದಲ್ಲಿ ವಿಕೆಟ್ ಕಬಳಿಸುವುದು ತಂಡಕ್ಕೆ ಬಹಳ ಮುಖ್ಯ ಎಂದು ಶ್ರೀಶಾಂತ್ ವಿವರಿಸಿದರು. ಪಾಂಡ್ಯ ಈ ರೀತಿ ಆಡಿದರೆ ಭಾರತ ಅರ್ಧಕ್ಕೆ ವಾಪಾಸ್ ಬರುವುದಿಲ್ಲ. ತಂಡದಲ್ಲಿ ಪಾಂಡ್ಯ, ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾರೆ ಎಂದು ಶ್ರೀಶಾಂತ್ ಹೇಳಿದರು. (ಏಜೆನ್ಸೀಸ್)