ಒಂದೇ ತಂಡದಲ್ಲಿ ಆಡಲಿದ್ದಾರೆ ವಿರಾಟ್​ ಕೊಹ್ಲಿ-ಬಾಬರ್​ ಅಜಾಮ್!​ ಯಾವ ಟೂರ್ನಿ?ಇಲ್ಲಿದೆ ಮಾಹಿತಿ...

Babar azam
Published on

ನವದೆಹಲಿ: ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಟೀಮ್​ ಇಂಡಿಯಾದ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕೊಹ್ಲಿ ಕಾಣದ ಗೆಲುವೂ ಇಲ್ಲ, ಸಾಧಿಸದ ದಾಖಲೆಯೂ ಇಲ್ಲ. ಪ್ರಸ್ತುತ ಕ್ರಿಕೆಟ್‌ನಲ್ಲಿ ಅವರ ಪ್ರಾಬಲ್ಯ ನಡೆಯುತ್ತಿದೆ. ಕೊಹ್ಲಿಯೊಂದಿಗೆ ಹೋಲಿಕೆ ಮಾಡುವ ಮತ್ತೊಬ್ಬ ಆಟಗಾರ ಇಲ್ಲ. ಆದರೆ, ಪಾಕಿಸ್ತಾನ ತಂಡದ ಅಭಿಮಾನಿಗಳು ಕೊಹ್ಲಿಗೆ ಸರಿಸಮಾನವಾಗಿ ನಮ್ಮ ಬಾಬರ್ ಅಜಾಮ್​ ಇದಾರೆ ಎನ್ನುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆದಿವೆ. ಅಲ್ಲದೆ, ಅಭಿಮಾನಿಗಳ ನಡುವೆ ಈ ರೀತಿಯ ಜಗಳ ಸಾಮಾನ್ಯ. ಆದರೆ, ಕೊಹ್ಲಿ ಮತ್ತು ಬಾಬರ್ ನಡುವೆ ಉತ್ತ0ಮ ಬಾಂಧವ್ಯವಿದೆ. ಅವರು ಒಳ್ಳೆಯ ಸ್ನೇಹಿತರು ಕೂಡ ಹೌದು. ಪ್ರತಿಸ್ಪರ್ಧಿಗಳಾಗಿ ಪರಸ್ಪರ ಎದುರು-ಬದುರಾದರು ಸಹ ಪರಸ್ಪರ ಗೌರವಿಸುತ್ತಾರೆ. ಈ ಇಬ್ಬರು ಸ್ಟಾರ್‌ಗಳು ಒಂದೇ ತಂಡದಲ್ಲಿ ಆಡಿದರೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ.

ಹೌದು, ಟೀಮ್​ ಇಂಡಿಯಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಪಾಕಿಸ್ತಾನದ ತಾರೆಯರಾದ ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಮತ್ತು ಇತರರು ಶೀಘ್ರದಲ್ಲೇ ಒಂದೇ ತಂಡದಲ್ಲಿ ಆಡುವ ಅವಕಾಶವನ್ನು ಹೊಂದಿದ್ದಾರೆ. ಒಮ್ಮೆ ಯಶಸ್ವಿಯಾದ ಆಫ್ರೋ-ಏಷ್ಯಾ ಕಪ್ ಅನ್ನು ಮತ್ತೆ ನಡೆಸಲು ಆಫ್ರಿಕಾ ಕ್ರಿಕೆಟ್ ಸಂಸ್ಥೆ ಉದ್ದೇಶಿಸಿದೆ ಎಂದು ವರದಿಯಾಗಿದೆ.

2005 ಮತ್ತು 2007ರಲ್ಲಿ ನಡೆದ ಟೂರ್ನಿಗಳು ಪ್ರೇಕ್ಷಕರು, ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. ಆದರೆ ಕೆಲ ಅನಿವಾರ್ಯ ಕಾರಣಗಳಿಂದ ಅದು ಸ್ಥಗಿತಗೊಂಡಿತ್ತು. ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಏಷ್ಯಾದ ದೇಶಗಳ ಕ್ರಿಕೆಟಿಗರು ಒಂದು ತಂಡವನ್ನು ಮತ್ತು ಆಫ್ರಿಕನ್ ಆಟಗಾರರು ಮತ್ತೊಂದು ತಂಡವನ್ನು ರಚಿಸುತ್ತಾರೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ಹಲವು ಖ್ಯಾತ ಆಟಗಾರರು ಈ ಟೂರ್ನಿಯಲ್ಲಿ ಮಿಂಚಿದ್ದರು. ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ಇಂಜಮಾಮ್-ಉಲ್-ಹಕ್, ಶೋಯೆಬ್ ಅಖ್ತರ್ ಮತ್ತು ಶಾಹಿದ್ ಅಫ್ರಿದಿ ಏಷ್ಯನ್ ತಂಡದಲ್ಲಿ ಒಟ್ಟಿಗೆ ಆಡಿದ್ದರು. ಶಾನ್ ಪೊಲಾಕ್, ಟಟೆಂಡಾ ತೈಬು ಮತ್ತು ಜಾಕ್ವೆಸ್ ಕಾಲಿಸ್ ಅವರಂತಹ ಆಟಗಾರರು ಆಫ್ರಿಕನ್ ತಂಡದಲ್ಲಿ ಆಡಿದರು.

2022ರಲ್ಲಿ ಈ ಪಂದ್ಯಾವಳಿಯನ್ನು ಮತ್ತೆ ಪ್ರಾರಂಭಿಸಲು, ಆಗಿನ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದ ಜಯ ಷಾ ಅವರು ಆಫ್ರಿಕಾದ ಕ್ರಿಕೆಟ್ ಸಂಸ್ಥೆಯ (ಎಸಿಸಿ) ಆಗಿನ ಅಧ್ಯಕ್ಷ ಸುಮೋದ್ ದಾಮೋದರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅಲ್ಲದೆ, ಎಸಿಸಿ ಅಭಿವೃದ್ಧಿ ಮುಖ್ಯಸ್ಥ ಮಹಿಂದ ವಲ್ಲಿಪುರಂ ಅವರೊಂದಿಗೆ ಸಮಾಲೋಚಿಸಿದ್ದರು. ಇದೀಗ ಮಹಿಂದ ಅವರು ಐಸಿಸಿ ಮಂಡಳಿಯ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಜಯ ಷಾ ಐಸಿಸಿ ಅಧ್ಯಕ್ಷರಾಗಿದ್ದು, ಆಫ್ರೋ-ಏಷ್ಯಾ ಕಪ್ ನಿರ್ವಹಣೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶವಿದೆ ಎಂದು ತೋರುತ್ತದೆ. ಇದು ನಿಜವಾದರೆ, ಬಾಬರ್, ಕೊಹ್ಲಿ, ರೋಹಿತ್, ಶಾಹೀನ್ ಅಫ್ರಿದಿಯಂತಹ ಭಾರತ-ಪಾಕ್ ತಾರೆಯರು ಒಟ್ಟಿಗೆ ಆಡುತ್ತಾರೆ ಎಂದು ಖಚಿತವಾಗಿ ಹೇಳಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net