

ಸ್ವಿಟ್ಜರ್ಲೆಂಡ್ : ಜಗತ್ತಿಗೆ ರೋಜರ್ ಫೆಡರರ್ ಟೆನ್ನಿಸ್ ಲೋಕದ ದಿಗ್ಗಜನ ರೂಪದಲ್ಲಿ ಕಾಣುತ್ತಾರೆ. ಆದರೆ ಅವರ ತಾಯ್ನಾಡಾದ ಸ್ವಿಟ್ಜರ್ಲೆಂಡ್ನ ಜನರಿಗೆ ಅವರ ಸ್ಥಾನಮಾನ ಅದಕ್ಕೂ ಹೆಚ್ಚಿನದಾಗಿದೆ. ಏಕೆಂದರೆ ಈ ಟೆನಿಸ್ ಸ್ಟಾರ್ನ ಶ್ರೇಷ್ಠ ಸಾಧನೆಗಳನ್ನು ಆಚರಿಸಲು, ದೇಶದ 'ರಾಷ್ಟ್ರೀಯ ದಿನ'ವನ್ನು ಒಂದು ವಾರ ಮುಂದೂಡಿ, ಫೆಡರರ್ ಜನ್ಮದಿನದಂದು ಆಚರಿಸುವ ಬಗ್ಗೆ ಚರ್ಚೆ ಸಾಗಿದೆ.
ಆಗಸ್ಟ್ 1 ಸ್ವಿಸ್ ಕಾನ್ಫಿಡರೆಸಿ ಸ್ಥಾಪನೆಯಾದ ದಿನ. ಅರ್ಥಾತ್ ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ದಿನಾಚರಣೆ. ಆದರೆ ಈ ವರ್ಷ ಅದನ್ನು ಆಗಸ್ಟ್ 8 ಕ್ಕೆ ಆಚರಿಸುವ ಪ್ರಸ್ತಾಪವನ್ನು ಸ್ವಿಸ್ ಸಂಸದರು ಮುಂದಿಟ್ಟಿದ್ದಾರೆ. ಏಕೆಂದರೆ ಈಗ 39 ವರ್ಷ ವಯಸ್ಸಾಗಿರುವ ಫೆಡರರ್ ಅಂದು 40 ವರ್ಷ ಪೂರೈಸಲಿದ್ದಾರೆ. ತನ್ನ ಆಟಗಾರನೊಬ್ಬನಿಗೆ ಯಾವ ದೇಶವೂ ಕೊಟ್ಟಿಲ್ಲದಂಥ ಕಾಣಿಕೆಯನ್ನು ಮಾಜಿ ವರ್ಲ್ಡ್ ನಂ.1 ಫೆಡರರ್ಗೆ ನೀಡಲು ಸ್ವಿಸ್ ಜನ ಮುಂದಾಗಿದ್ದಾರೆ.
ಮೊದಲಿಗೆ ಸ್ವಿಸ್ ಸಂಸತ್ತಿನ ಕೆಲವು ಶಾಸಕರು ಈ ರೀತಿ ವಿಭಿನ್ನವಾಗಿ ಫೆಡರರ್ಗೆ ಸನ್ಮಾನ ಸಲ್ಲಿಸುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತಾಪ ಮಾಡಿದರು. ತಕ್ಷಣವೇ ಅವರ ಅಭಿಮಾನಿಗಳ ಒಲವು ಪಡೆದ ಪ್ರಸ್ತಾಪ, ಸ್ವಲ್ಪ ದಿನಗಳಲ್ಲೇ ಎಂಟು ಮಿಲಿಯನ್ ಜನಸಂಖ್ಯೆಯುಳ್ಳ ದೇಶದ ಚರ್ಚೆಯ ವಿಷಯವಾಯಿತು. ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್ಶಿಪ್ ಗೆದ್ದಿರುವ ಫೆಡರರ್ಗೆ ಗೌರವ ಸೂಚಿಸಲು ಈ ಮುನ್ನ ಸ್ವಿಸ್ ಸ್ಟ್ಯಾಂಪ್ ಕೂಡ ಬಿಡುಗಡೆ ಮಾಡಿರುವ ಸರ್ಕಾರ, ಈ ಬಗ್ಗೆ ಇನ್ನೇನು ನಿರ್ಣಯ ಸ್ವೀಕರಿಸಲಿದೆ.
ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಫೆಷನಲ್ಸ್(ಎಟಿಪಿ)ನಲ್ಲಿ ಹಾಲಿ ವರ್ಲ್ಡ್ ನಂ.6 ಸ್ಥಾನದಲ್ಲಿರುವ ಫೆಡರರ್, ಮಂಡಿಯ ಶಸ್ತ್ರಚಿಕಿತ್ಸೆಯ ನಂತರ ಎಟಿಪಿ ಪ್ರವಾಸಕ್ಕೆ ಹಿಂದಿರುಗಿದ್ದಾರೆ. ತದನಂತರ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್ನಲ್ಲಿ ಕೂಡ ಭಾಗವಹಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)