

ದುಬೈ : ದುಬೈನ ಬುರ್ಜ್ ಖಲೀಫಾದಲ್ಲಿ ಅತ್ಯಂತ ಎತ್ತರದಲ್ಲಿರುವ ರೆಸ್ಟೊರೆಂಟ್ ಒಂದರಲ್ಲಿ ಇಡೀ ನಗರದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಬ್ರೇಕ್ಫಾಸ್ಟ್ ಸವಿಯುವುದೆಂದರೆ...? ಆಹಾ! ಇಂಥ ರೋಮಾಂಚಕ ಅನುಭವವನ್ನು ಬಿಗ್ ಬಾಸ್ ಖ್ಯಾತಿಯ ನಟಿ ಸನಾ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮ ಪತಿ ಅನಸ್ ಸೈಯದ್ ಅವರೊಂದಿಗೆ ದುಬೈ ಪ್ರವಾಸಕ್ಕೆ ಹೋಗಿದ್ದ ಸನಾ ಖಾನ್, ಜಗತ್ತಿನ ಅತಿ ಉದ್ದದ ಕಟ್ಟಡವಾದ ಬುರ್ಜ್ ಖಲೀಫಾದ 122ನೇ ಮಹಡಿಯಲ್ಲಿರುವ ಅಟಮಾಸ್ಫಿಯರ್ ಎಂಬ ರೆಸ್ಟೊರೆಂಟ್ನಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಾರೆ. ತಮಗೆ ಸರ್ಪ್ರೈಸ್ ಆಗಿ ಪತಿ ಅಲ್ಲಿಗೆ ಕರೆದುಕೊಂಡು ಹೋದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸನಾ, ವಿಡಿಯೋ ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಮೊಟ್ಟೆಯಿಂದ ತಯಾರಿಸಿದ ಸನ್ನಿ ಸೈಡ್ ಅಪ್ ಮತ್ತು ಅರಗುಲಾ ಸೊಪ್ಪಿನ ಸಲಾಡ್ ಜೊತೆಗೆ ಚಿನ್ನದ ಪದರದ ಲೇಪ ಹೊಂದಿದ ಕಾಫಿಯನ್ನು ಸನಾ ದಂಪತಿಗಳು ಸವಿದಿದ್ದಾರೆ. ತಮ್ಮ ಪೋಸ್ಟ್ಗೆ "ನಿಮ್ಮ ಗಂಡ ಬುರ್ಜ್ ಖಲೀಫಾದ ಮೇಲೆ ಬ್ರೇಕ್ಫಾಸ್ಟ್ ಕೊಡಿಸಿ ಚಕಿತಗೊಳಿಸಿದಾಗ... ಓಹ್! ಆ ಗೋಲ್ಡ್ ಪ್ಲೇಟೆಡ್ ಕಾಫಿ" ಎಂದು ಶೀರ್ಷಿಕೆ ನೀಡಿದ್ದಾರೆ, ಸನಾ. ಕೆಲವೇ ಗಂಟೆಗಳಲ್ಲಿ ಅವರ ಈ ಪೋಸ್ಟ್ಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ಲೈಕ್ಗಳು ಲಭಿಸಿವೆ. (ಏಜೆನ್ಸೀಸ್)