ಡೆಲ್ಲಿ ವಿರುದ್ಧ ಔಟ್​ ಆದರೂ ಐತಿಹಾಸಿಕ ದಾಖಲೆ ಬರೆದ 'ಕಿಂಗ್ ಕೊಹ್ಲಿ'! ವಿರಾಟ್​ಗೆ ತಲೆಬಾಗಿದ ಆರ್​ಸಿಬಿ ಫ್ಯಾನ್ಸ್​

WhatsApp Image 2024-05-12 at 8.15.35 PM
Published on

ಬೆಂಗಳೂರು: ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇಆಫ್​ ಕನಸನ್ನು ಉಳಿಸಿಕೊಳ್ಳಲು ಭಾರೀ ಹಣಾಹಣಿಗೆ ಮುಂದಾಗಿದೆ. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಪಡೆ, ಆರ್​ಸಿಬಿಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿದೆ.

ಇನ್ನೂ ಆರಂಭಿಕ ಹಂತದಲ್ಲೇ ಕ್ಯಾಪ್ಟನ್ ಫಾಫ್​ರನ್ನು ಕಳೆದುಕೊಂಡ ಆರ್​ಸಿಬಿಗೆ ವಿರಾಟ್​ ಕೊಹ್ಲಿ ವಿಕೆಟ್​ ಕಳೆದುಕೊಂಡಿದ್ದು, ದೊಡ್ಡ ಆಘಾತವನ್ನು ತಂದೊಡ್ಡಿತು. ಮೊದಲ ಬಾಲ್​ನಿಂದಲೇ ಸ್ಪೋಟಕ ಬ್ಯಾಟಿಂಗ್ ಶುರುಮಾಡಿದ ವಿರಾಟ್​, ಕೇವಲ 13 ಎಸೆತಗಳಲ್ಲಿ 27 ರನ್​ಗಳನ್ನು ಸಿಡಿಸಿ, ಪೆವಿಲಿಯನ್​ನತ್ತ ಮುಖಮಾಡಿದರು. ತಮ್ಮ ನೆಚ್ಚಿನ ಸ್ಟಾರ್ ಆಟಗಾರನನ್ನು ನೋಡಲು ಸ್ಟೇಡಿಯಂ ತುಂಬ ಆವರಿಸಿಕೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿ ವಿಕೆಟ್​ ಪತನ ಅತೀವ ನೋವುಂಟುಮಾಡಿತು.

ಬೇಸರದ ಮಧ್ಯೆಯೂ ಸಂತಸದ ಸುದ್ದಿಯೊಂದು ಇದೀಗ ಹೊರಬಿದ್ದಿದ್ದು, ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿರುವ ರನ್ ಮಷಿನ್​, ಇದೀಗ ಐಪಿಎಲ್​ 17ನೇ ಆವೃತ್ತಿಯಲ್ಲಿಯೂ ಸಹ ಅತೀ ಹೆಚ್ಚು ರನ್​ ಗಳಿಸಿರುವ ಬ್ಯಾಟ್ಸ್​ಮನ್​ ಆಗಿ ಹೊರಹೊಮ್ಮಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಆದರೆ, ಇದೀಗ ಐಪಿಎಲ್​ನಲ್ಲಿ ವಿಶೇಷ ಹಾಗೂ ಐತಿಹಾಸಿಕ ದಾಖಲೆ ನಿರ್ಮಿಸಿರುವ ವಿರಾಟ್​, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಒಂದೇ ಫ್ರಾಂಚೈಸಿ ಪರ 250ನೇ ಪಂದ್ಯ ಆಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ, ಈ ದಾಖಲೆ ಮಾಡಿದ ಮೊದಲ ಆಟಗಾರ ಎಂಬ ಪಟ್ಟವನ್ನು ಸಹ ಅಲಂಕರಿಸಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 250 ಮ್ಯಾಚ್​ಗಳನ್ನು ಪೂರೈಸಿದ ಮೊದಲ ಆಟಗಾರ ಎಂದು ಕಾಣಿಸಿಕೊಂಡಿರುವ ವಿರಾಟ್,​ ಈ ಮೈಲಿಗಲ್ಲನ್ನು ತಲುಪಿದ ಅತ್ಯಂತ ಯಶಸ್ವಿ ಕ್ರಿಕೆಟರ್​ ಎಂದು ಹೇಳಲಾಗಿದೆ. ಅಪಾರ ಸಂಖ್ಯೆಯ ನಿಷ್ಠಾವಂತ ಆರ್​ಸಿಬಿ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿರುವ ರನ್​ ಮಷಿನ್​, ಈ ದಾಖಲೆ ನಿರ್ಮಿಸುವ ಮೂಲಕ ಫ್ಯಾನ್ಸ್​ಗಳ ಹರ್ಷೋದ್ಘಾರಕ್ಕೆ ಕಾರಣರಾಗಿದ್ದಾರೆ.

ಸದ್ಯ 17ನೇ ಐಪಿಎಲ್ ಆವೃತ್ತಿಯಲ್ಲಿ ಲೀಡಿಂಗ್​ ರನ್​ ಸ್ಕೋರರ್​ ಆಗಿ ಹೊರಹೊಮ್ಮಿರುವ ವಿರಾಟ್, ಪ್ರಸ್ತುತ​ 13 ಪಂದ್ಯಗಳಲ್ಲಿ 661 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್​ ಸರದಾರರಾಗಿ ಮಿಂಚಿದ್ದಾರೆ. ಅದರಲ್ಲೂ ಒಂದು ಶತಕ ಬಾರಿಸಿರುವ ವಿರಾಟ್​, ಆರ್​ಸಿಬಿ ಪರ ಸತತ ರನ್​ ಗಳಿಸಿಕೊಡುವಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಚಾಲೆಂಜರ್ಸ್,​ ತಮ್ಮ ಪ್ಲೇಆಫ್​ ಕನಸನ್ನು ಈಡೇರಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net