

ನವದೆಹಲಿ: ನಾನು ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರಬಹುದಷ್ಟೇ ಆದರೆ, ನನ್ನ ಬಳಿ ಈಗಲೂ ಅದೇ ಪವರ್ ಇದೆ ಎಂಬುದನ್ನು ವೆಸ್ಟ್ಇಂಡೀಸ್ ಮಾಜಿ ಸ್ಫೋಟಕ ಆಟಗಾರ ಕೀರನ್ ಪೊಲ್ಲಾರ್ಡ್ ನಿರೂಪಿಸಿದ್ದಾರೆ. ಜಗತ್ತಿನ ಅಪಾಯಕಾರಿ ಬೌಲರ್ಗಳಲ್ಲಿ ಒಬ್ಬರಾದ ಅಫ್ಘಾನಿಸ್ತಾನದ ರಶೀದ್ ಖಾನ್ ಅವರ ಬೌಲಿಂಗ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಪೊಲ್ಲಾರ್ಡ್ ಒಂದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ.
ದಿ ಹಂಡ್ರೆಡ್ ಟೂರ್ನಿಯಲ್ಲಿ ಪೊಲ್ಲಾರ್ಡ್ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ಸದರ್ನ್ ಬ್ರೇವ್ಸ್ ಪರ ಆಡಿದ ಪೊಲ್ಲಾರ್ಡ್, ಟ್ರೆಂಟ್ ರಾಕೆಟ್ಸ್ ತಂಡದ ಬೌಲರ್ ರಶೀದ್ ಖಾನ್ಗೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಬಾರಿಸಿದರು. ಪೊಲ್ಲಾರ್ಡ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕಾರಣ ಸದರ್ನ್ ಬ್ರೇವ್ಸ್ ತಂಡ 1 ಬಾಲ್ ಬಾಕಿ ಇರುವಾಗಲೇ 127 ರನ್ಗಳ ಗುರಿಯನ್ನು ತಲುಪಿತು. ಆಗಸ್ಟ್ 10ರಂದು ಸೌಥಂಪ್ಟನ್ನ ರೋಸ್ ಬೌಲ್ನಲ್ಲಿ ಈ ಪಂದ್ಯ ನಡೆಯಿತು.
ಮೊದಲ 15 ಎಸೆತಗಳಲ್ಲಿ 10 ರನ್ ನೀಡಿ ಒಂದು ವಿಕೆಟ್ ಪಡೆಯುವ ಮೂಲಕ ರಶೀದ್, ಉತ್ತಮ ಎಕನಾಮಿಯನ್ನು ಕಾಯ್ದುಕೊಂಡಿದ್ದರು. ಆದರೆ, ತಂಡದ ಗೆಲುವಿಗೆ 20 ಎಸೆತಗಳಲ್ಲಿ 49 ರನ್ ಬೇಕಿದ್ದಾಗ ಅಬ್ಬರಿಸಿದ ಪೊಲ್ಲಾರ್ಡ್, ರಶೀದ್ ಖಾನ್ ಅವರ ಎಕನಾಮಿಯನ್ನೇ ಸಂಪೂರ್ಣ ತಲೆಕೆಳಗೆ ಮಾಡಿದರು. ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ಅಂತರವನ್ನು 15 ಎಸೆತಕ್ಕೆ 19 ರನ್ ಗುರಿಗೆ ತಂದಿಟ್ಟರು.
ಪೊಲ್ಲಾರ್ಡ್ ಕೇವಲ 23 ಎಸೆತಗಳಲ್ಲಿ 45 ರನ್ ಗಳಿಸಿದರು. ಇದರ ಪರಿಣಾಮ ಗೆಲುವು ಸದರ್ನ್ ಬ್ರೇವ್ ತಂಡದ ಪರವಾಯಿತು. ಬಳಿಕ ಮಾತನಾಡಿದ ಪೊಲ್ಲಾರ್ಡ್, ಇದರಿಂದ ಕೆಲವು ಪಾಠಗಳನ್ನು ಕಲಿತಿದ್ದೇವೆ ಮತ್ತು ಮುಂದಿನ ಬಾರಿ ಇಂತಹ ಪರಿಸ್ಥಿತಿಗೆ ನಮ್ಮನ್ನು ನಾವು ಹಾಕಿಕೊಳ್ಳುವುದಿಲ್ಲ ಎಂದರು. ಅಲ್ಲದೆ, ಇದೇ ಸಂದರ್ಭದಲ್ಲಿ ರಶೀದ್ ಬಗ್ಗೆ ಮಾತನಾಡಿದ ಅವರು, ನಾನು ಅನೇಕ ಬಾರಿ ರಶೀದ್ ವಿರುದ್ಧ ಆಡಿದ್ದೇನೆ ಮತ್ತು ಹಲವು ಬಾರಿ ಔಟ್ ಕೂಡ ಆಗಿದ್ದೇನೆ. ಆದರೆ, ಆತ ಬೌಲಿಂಗ್ ಮಾಡುವ ಲೈನ್ ಅಂಡ್ ಲೆಂಥ್ ಬಗ್ಗೆ ನನಗೆ ಚೆನ್ನಾಗಿ ತಿಳಿದಿತ್ತು ಎಂದಿದ್ದಾರೆ. (ಏಜೆನ್ಸೀಸ್)