ಕರ್ನಾಟಕಕ್ಕೆ ಇಂದು ಉತ್ತರ ಪ್ರದೇಶ ಸವಾಲು, ಭರ್ಜರಿ ಗೆಲುವಿನ ಅನಿವಾರ‌್ಯತೆ

karun web
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ತನ್ನ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ನಡೆಯಲಿರುವ ಈ ಪಂದ್ಯದಲ್ಲಿ ಭಾರಿ ಅಂತರದಿಂದ ಗೆಲುವು ದಾಖಲಿಸಿದರಷ್ಟೇ ಕರ್ನಾಟಕ ತಂಡದ ನಾಕೌಟ್ ಆಸೆ ಜೀವಂತ ಉಳಿಯಲಿದೆ.

ಕರುಣ್ ನಾಯರ್ ಬಳಗ ಈ ಪಂದ್ಯಗಳಲ್ಲಿ ಜಮ್ಮು-ಕಾಶ್ಮೀರ, ತ್ರಿಪುರ, ರೈಲ್ವೇಸ್ ವಿರುದ್ಧ ಗೆಲುವು ದಾಖಲಿಸಿದ್ದರೂ, ಪಂಜಾಬ್ ವಿರುದ್ಧ ಸೋಲು ಕಂಡಿರುವುದು ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ತಪ್ಪಿಸಿದೆ. ಸದ್ಯ ಆಡಿರುವ 4 ಪಂದ್ಯಗಳಲ್ಲೂ ಗೆದ್ದಿರುವ ಪಂಜಾಬ್ (+2.81), ಕೊನೇ ಲೀಗ್ ಪಂದ್ಯದಲ್ಲಿ ತ್ರಿಪುರ ವಿರುದ್ಧ ಸೋತರೂ, ಉತ್ತಮ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದು ಮತ್ತು ನಾಕೌಟ್‌ಗೇರುವುದು ಬಹುತೇಕ ನಿಶ್ಚಿತವೆನಿಸಿದೆ.

ಪ್ರತಿ ಗುಂಪಿನ ಅಗ್ರ ತಂಡಗಳ ಜತೆಗೆ 5 ಎಲೈಟ್ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಅತ್ಯುತ್ತಮ 2 ತಂಡಗಳು ಕ್ವಾರ್ಟರ್​ಫೈನಲ್‌ಗೇರಲಿವೆ. ಈ ನಿಟ್ಟಿನಲ್ಲಿ ರಾಜ್ಯ ತಂಡ ತನ್ನ ಅಂಕ ಗಳಿಕೆಯನ್ನು 12ರಿಂದ 16ಕ್ಕೆ ಏರಿಸಿಕೊಳ್ಳುವ ಜತೆಗೆ ರನ್‌ರೇಟ್ ಸುಧಾರಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ಇದೀಗ ಎಲ್ಲ ಗುಂಪುಗಳಲ್ಲಿ ಅಂತಿಮ ಲೀಗ್ ಪಂದ್ಯ ಬಾಕಿ ಉಳಿದಿದ್ದು, ಸದ್ಯ ಇತರ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಬಂಗಾಳ (+1.058), ಗುಜರಾತ್ (+1.348), ರಾಜಸ್ಥಾನ (+0.401) ಮತ್ತು ಕೇರಳ (+0.617) ತಂಡಗಳು ಕರ್ನಾಟಕಕ್ಕಿಂತ (+0.259) ಉತ್ತಮ ರನ್‌ರೇಟ್ ಹೊಂದಿವೆ. ಹೀಗಾಗಿ ರಾಜ್ಯ ತಂಡಕ್ಕೆ ಭರ್ಜರಿ ಗೆಲುವಿನ ಜತೆಗೆ ಇತರ ಪಂದ್ಯಗಳ ಫಲಿತಾಂಶವೂ ಪೂರಕವಾಗಿ ಬಂದರಷ್ಟೇ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಕೌಟ್‌ಗೇರುವ ಅದೃಷ್ಟ ಒಲಿಯಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.00

ಪ್ರಮುಖರ ಗೈರಿನ ಹೊಡೆತ

ಮನೀಷ್ ಪಾಂಡೆ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಅವರಂಥ ಪ್ರಮುಖ ಬ್ಯಾಟ್ಸ್‌ಮನ್‌ಗಳ ಗೈರಿನಲ್ಲಿ ಕರ್ನಾಟಕ ತಂಡ ಈ ಬಾರಿ ಹೊಡೆತ ಎದುರಿಸಿದೆ. ಅಲ್ಲದೆ ತಂಡದಲ್ಲಿರುವ ಅನುಭವಿ-ಯುವ ಆಟಗಾರರೂ ಅಸ್ಥಿರ ನಿರ್ವಹಣೆಯಿಂದ ತಂಡಕ್ಕೆ ಹಿನ್ನಡೆ ತಂದಿದ್ದಾರೆ. ಕರ್ನಾಟಕ ತಂಡ ಸದ್ಯ ಸಂಘಟಿತ ಆಟದ ಕೊರತೆಯನ್ನೂ ಎದುರಿಸುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧಕೃಷ್ಣ, ಅಭಿಮನ್ಯು ಮಿಥುನ್ ಉತ್ತಮ ದಾಳಿ ನಡೆಸಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ನಿರೀಕ್ಷಿತ ಮಟ್ಟದ ಯಶ ಕಂಡುಬಂದಿಲ್ಲ. ಇದುವೇ ರಾಜ್ಯ ತಂಡ ದುರ್ಬಲ ತಂಡಗಳ ವಿರುದ್ಧವೂ ಗೆಲುವಿಗಾಗಿ ಪರದಾಡುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net