

ಲಾಹೋರ್: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ (Pakistan), ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಈ ಹಿಂದಿನಿಂದಲೂ ಭಾರೀ ಕಸರತ್ತು ನಡೆಸುತ್ತಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಪಿಸಿಬಿ (PCB) ಈ ಹಿಂದೆಯೇ ಬಿಸಿಸಿಐಗೆ ಒತ್ತಾಯಿಸಿತ್ತು. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಪಾಕ್ಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿತ್ತು. ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್ ಇನ್ ಬ್ಲ್ಯೂ ಪಡೆಯನ್ನು ಲಾಹೋರ್ಗೆ ಕರೆತರುವ ಪಾಕ್ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ. ಸದ್ಯ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರನ್ನು ಸಖಾಸುಮ್ಮನೆ ಗುರಿಯಾಗಿಸಿ, ಟೀಕಿಸುತ್ತಿದ್ದ ಪಾಕ್ ಮಾಜಿ ಕ್ರಿಕೆಟಿಗರ ಪೈಕಿ ಇದೀಗ ಕಮ್ರಾನ್ ಅಕ್ಮಲ್ (Kamran Akmal) ನೀಡಿದ ಹೇಳಿಕೆ ಬಹಳ ಶಾಕಿಂಗ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಸಿಡಿದೆದ್ದು ಮಾತನಾಡಿರುವ ಪಾಕ್ ಮಾಜಿ ಹಿರಿಯ ಆಟಗಾರ ಕಮ್ರಾನ್ ಅಕ್ಮಲ್, "ಒಂದು ದೇಶದ ಕ್ರಿಕೆಟ್ ತಂಡ ಮೈದಾನದಲ್ಲಿ ಚೆನ್ನಾಗಿ ಪ್ರದರ್ಶನ ತೋರಬೇಕು, ಅವರಲ್ಲಿ ಒಳ್ಳೆಯ ಸಂಬಂಧ ಇರಬೇಕು ಎಂದರೆ ಅದಕ್ಕೆ ಆಯಾ ದೇಶದ ಕ್ರಿಕೆಟ್ ಬೋರ್ಡ್ ದೊಡ್ಡ ಬಲವಾಗಿರಬೇಕು. ಆದ್ರೆ, ನಮ್ಮಲ್ಲಿ ಹಾಗಿಲ್ಲ. ದೂರದೃಷ್ಟಿ ಕೂರತೆ, ಸರಿಯಾದ ವ್ಯವಸ್ಥೆಯಿಲ್ಲ ಮತ್ತು ಹಣಕಾಸು ಸಮಸ್ಯೆಗಳು ಮಂಡಳಿಯಲ್ಲಿ ತಾಂಡವವಾಡುತ್ತಿದೆ. ಈ ವಿಷಯದಲ್ಲಿ ಪಿಸಿಬಿ ಭಾರತೀಯ ಕ್ರಿಕೆಟ್ ಬೋರ್ಡ್ ಅವರನ್ನು ನೋಡಿ ಕಲಿಯುವುದು ಒಳಿತು" ಎಂದು ಕಿಡಿಕಾರಿದರು.
"ಬಿಸಿಸಿಐ, ಕ್ರಿಕೆಟ್‌ನ ಮೂಲಸೌಕರ್ಯ, ಆಟಗಾರರ ಯೋಗಕ್ಷೇಮ ಮತ್ತು ಕ್ರೀಡೆಯ ಪ್ರಭಾವವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲು ತಮ್ಮ ಮಂಡಳಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದೆ. ಕೇವಲ ಒಂದು ಐಪಿಎಲ್ ಮೂಲಕ ನೀವು ತಿಳಿದುಕೊಳ್ಳಬೇಕು ಬಿಸಿಸಿಐ ಹೇಗೆ ಕ್ರಿಕೆಟ್‌ನ ಬ್ರ್ಯಾಂಡ್ ಹೆಚ್ಚಿಸುತ್ತಿದೆ, ಮಾರ್ಕೆಟಿಂಗ್ ಪ್ಲ್ಯಾನಿಂಗ್ನ ಹೇಗೆಲ್ಲಾ ಮಾಡುತ್ತಿದೆ ಎಂದು. ಭಾರತೀಯ ಆಟಗಾರರಿಂದ ಹಿಡಿದು ವಿದೇಶಿ ಆಟಗಾರರೊಂದಿಗಿನ ಸಂಬಂಧ, ಒಪ್ಪಂದ, ಅಭಿವೃದ್ಧಿ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ಬಿಸಿಸಿಐ ನೋಡಿಕೊಳ್ಳುತ್ತಿದೆ. ಇದು ಭಾರತೀಯ ಕ್ರಿಕೆಟ್ ಅನ್ನು ಯಶಸ್ವಿಗೊಳಿಸಿ, ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ" ಎಂದು ಹೇಳಿದರು.
"ನಮ್ಮ ಕ್ರಿಕೆಟ್ ಮಂಡಳಿಯವರು ಬಿಸಿಸಿಐ ಅವರ ವೃತ್ತಿಪರತೆ, ತಂಡ, ಆಯ್ಕೆದಾರರ ಸಮಿತಿ ಮತ್ತು ತರಬೇತುದಾರ ಕೆಲಸ-ಕಾರ್ಯಗಳನ್ನು ನೋಡಿ ಕಲಿಯಬೇಕು. ಇವು ತಂಡವನ್ನು ನಂಬರ್ ಒನ್ ಸ್ಥಾನದಲ್ಲಿ ಇರಿಸಲು ಮತ್ತು ಪ್ರಪಂಚದ ಮೇಲೆ ಪ್ರಾಬಲ್ಯ ಸಾಧಿಸುವ ವಿಷಯಗಳಾಗಿವೆ" ಎಂದು ನೇರವಾಗಿ ಪಿಸಿಬಿಗೆ ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).