

ನವದೆಹಲಿ: ಮೊನ್ನೆಯಷ್ಟೇ ಅಡಿಲೇಡ್ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಕಾಂಗರೂ ಪಡೆಯ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಮಧ್ಯೆ ಉಂಟಾದ ಸಂಘರ್ಷ ಸದ್ಯ ದೊಡ್ಡ ವಿವಾದಕ್ಕೆ ತಿರುಗಿದೆ. ಹೆಡ್ರ ವಿಕೆಟ್ ಕಬಳಿಸಿದ ಸಿರಾಜ್, ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ ರೀತಿ ಕೆಲವರಿಗೆ ಇಷ್ಟವಾಗಲಿಲ್ಲ. ಬ್ಯಾಟರ್‌ಗೆ ಯಾವುದೇ ಅವಾಚ್ಯ ಪದ ಬಳಸದ ಸಿರಾಜ್ (Siraj) ವಿರುದ್ಧ ಟ್ರಾವಿಸ್ ಪತ್ರಕರ್ತರ ಮುಂದೆ ಸುಳ್ಳು ಆರೋಪ ಎಸಗಿದ್ದು, ನಾನು ಮೆಚ್ಚಿ ಮಾತನಾಡಿದರು ಸಹ ಸಿರಾಜ್ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು ಎಂದರು. ಈ ಮಾತು ಹೊರಬಿದ್ದ ಬೆನ್ನಲ್ಲೇ ಇಬ್ಬರ ನಡುವಿನ ವಿವಾದಕ್ಕೆ ಎರಡು ತಂಡದ ಮಾಜಿ ಕ್ರಿಕೆಟಿಗರು ಕಿಡಿಕಾರುತ್ತಿದ್ದಾರೆ.
ಒಂದೆಡೆ ಕ್ರಿಕೆಟ್ ಅಭಿಮಾನಿಗಳು ವಿಡಿಯೋ ಸಾಕ್ಷಿ ಮುಂದಿಟ್ಟು ಟ್ರಾವಿಸ್ರನ್ನು ಟೀಕಿಸಿದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಕಣ್ಣು ಮುಂದೆ ಪುರಾವೆ ಇದ್ದರೂ ಸಹ ಭಾರತದ ವೇಗಿಯನ್ನು ಬ್ಯಾನ್ ಮಾಡಬೇಕು ಇಲ್ಲ ದಂಡ ವಿಧಿಸಬೇಕು ಎಂದೆಲ್ಲಾ ನಾಲಿಗೆ ಹರಿಬಿಟ್ಟಿದ್ದಾರೆ. ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಇನ್ನೂ ಮೂರು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿದ್ದು, ಇದರ ನಡುವೆಯೇ ಈ ವಿಚಾರ ದೊಡ್ಡ ವಿವಾದಕ್ಕೆ ಎಡಮಾಡಿಕೊಟ್ಟಿದೆ. ವಿಡಿಯೋ ಸಾಕ್ಷಿಯನ್ನು ಕಂಡಿದ್ದರೂ ಕೂಡ ಇದೀಗ ಸಿರಾಜ್ ವಿರುದ್ಧವೇ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಗುಡುಗಿದ್ದಾರೆ.
"ಇದು ಅಶಿಸ್ತಿನ ನಡೆ. ಮಾರ್ನಸ್ ಲ್ಯಾಬುಸ್ಚಾಗ್ನೆ ಬಳಿ ಬಾಲ್ ಎಸೆದಿದ್ದು ಮತ್ತು ಟ್ರಾವಿಸ್ ಹೆಡ್ ಜತೆ ಅನುಚಿತವಾಗಿ ವರ್ತಿಸಿದ್ದು ಸಿರಾಜ್ ಮಾಡಿದ ಎರಡು ತಪ್ಪುಗಳು. ಸಿರಾಜ್ನ ಈ ನಡೆ ಯುವ ಕ್ರಿಕೆಟಿಗರಿಗೆ ಯಾವ ಸಂದೇಶ ರವಾನಿಸುತ್ತಿದೆ? ಹೆಡ್ 79 ರನ್ ಗಳಿಸಿದ್ದಾಗಲೇ ಸಿರಾಜ್‌ಗೆ ಅವರನ್ನು ಪೆವಿಲಿಯನ್ಗೆ ಕಳಿಸುವ ಅವಕಾಶವಿತ್ತು, ಆದರೆ ವೇಗಿ ಕ್ಯಾಚ್ ಹಿಡಿಯಲು ವಿಫಲರಾದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂತಹ ಕ್ಯಾಚ್‌ಗಳನ್ನು ನೀವು ಹಿಡಿಯುವುದು ಬಹಳ ಮುಖ್ಯ" ಎಂದರು.
"ಟ್ರಾವಿಸ್ ಹೆಡ್ ವೇಗಿ ಸಿರಾಜ್ ಸೇರಿದಂತೆ ಉಳಿದ ಬೌಲರ್ಗಳ ಬಾಲ್ಗಳಿಗೆ ಮೈದಾನದ ಪೂರ ಸಿಕ್ಸ್ ಮತ್ತು ಬೌಂಡರಿಗಳನ್ನು ಬಾರಿಸಿದ್ದಾರೆ. ವಿಕೆಟ್ ಪಡೆದ ನಿಮ್ಮ ಖುಷಿ, ಸಂಭ್ರಮವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, 140 ರನ್ ಗಳಿಸಿದ ಒಬ್ಬ ಬ್ಯಾಟರ್‌ಗೆ ಕೊಡುವ ಗೌರವ ಅದಲ್ಲ. ಆತನನ್ನು ಆ ರೀತಿ ಪೆವಿಲಿಯನ್ಗೆ ಕಳಿಸುವುದು ಸರಿಯಲ್ಲ" ಎಂದು ಕೈಫ್ ಎಚ್ಚರಿಸಿದ್ದಾರೆ,(ಏಜೆನ್ಸೀಸ್).