

ನವದೆಹಲಿ: ಕಳೆದ ಐಪಿಎಲ್-2024 ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಲೀಗ್ ಹಂತದ ಕೊನೆಯ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿ ಪ್ಲೇಆಫ್ ಹಂತಕ್ಕೇರಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಎಂ.ಎಸ್. ಧೋನಿ, ಕೋಪದಿಂದ ಟಿವಿಯನ್ನು ಒಡೆದು ಹಾಕಿದ್ದರು ಎಂದು ಪತ್ರಕರ್ತರೊಬ್ಬರು ಇದೀಗ ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ( CSK ) 27 ರನ್ಗಳಿಂದ ಸೋಲುವ ಮೂಲಕ ನಾಕೌಟ್ ಸುತ್ತಿಗೆ ಹೋಗುವ ಅವಕಾಶವನ್ನು ಕಳೆದುಕೊಂಡಿತು. ಆರ್ಸಿಬಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿತು. ಇದೇ ಬೇಸರದಲ್ಲಿ ಪಂದ್ಯದ ನಂತರ ಧೋನಿ ಆರ್ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡಿ ಡ್ರೆಸ್ಸಿಂಗ್ ಹೋಗಿದ್ದರು. ಈ ವಿಚಾರ ಆ ಸಂದರ್ಭದಲ್ಲಿ ಭಾರಿ ವಿವಾದವನ್ನೇ ಹುಟ್ಟಿಹಾಕಿತ್ತು. ಅಲ್ಲದೆ, ತೀವ್ರ ಚರ್ಚೆಯು ನಡೆದಿತ್ತು.
ಹಲವು ತಿಂಗಳುಗಳ ಬಳಿಕ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಪತ್ರಕರ್ತರೊಬ್ಬರು ಧೋನಿ ಕೋಪದಿಂದ ಟಿವಿ ಹೊಡೆದು ಹಾಕಿದ್ದರು ಎಂದು ಹೇಳಿಕೊಂಡಿದ್ದಾರೆ. ನಾನು ವಿಶೇಷವಾದ ವಿಚಾರವೊಂದರ ಬಗ್ಗೆ ತಿಳಿದುಕೊಂಡಿದ್ದೇನೆ. ಧೋನಿ ಏಕೆ ಆರ್ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಲಿಲ್ಲ ಎಂದು ನಾನು ಭಜ್ಜಿ ( ಹರ್ಭಜನ್ ) ಅವರ ಬಳಿ ಕೇಳಿದೆ. ಹಸ್ತಲಾಘವ ಮಾಡದಿರುವುದು ಮಾತ್ರವಲ್ಲ ಅಂದು ಧೋನಿ, ಟಿವಿಯನ್ನು ಸಹ ಒಡೆದು ಹಾಕಿದ್ದರು. ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಕಳೆದುಕೊಂಡಿದ್ದಕ್ಕಾಗಿ ಧೋನಿ ತುಂಬಾ ಕೋಪಗೊಂಡಿದ್ದರು ಎಂದು ಭಜ್ಜಿ ನನಗೆ ಹೇಳಿದರು ಎಂದು ಪತ್ರಕರ್ತ ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಪ್ಲೇ ಆಫ್ ತಲುಪಲು ಬೆಂಗಳೂರು ಆ ಪಂದ್ಯದಲ್ಲಿ ಕನಿಷ್ಠ 18 ರನ್ಗಳಿಂದ ಚೆನ್ನೈ ತಂಡವನ್ನು ಸೋಲಿಸಬೇಕಿತ್ತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 218 ರನ್ ಗಳಿಸಿತ್ತು. 219 ರನ್ಗಳ ಗುರಿ ಬೆನ್ನತ್ತಿದ್ದ ಸಿಎಸ್ಕೆ ಬ್ಯಾಟ್ಸ್ಮನ್ಗಳು ಬಿರುಸಿನ ಆಟವಾಡಿ ಆರ್ಸಿಬಿ ಬೌಲರ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ನತ್ತ ಮುಖ ಮಾಡಿದರು. ಅಂತಿಮ ಹಂತದಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಜೊತೆಯಾಟವನ್ನು ನಿರ್ಮಿಸಿ ತಂಡವನ್ನು ಪ್ಲೇ ಆಫ್ಗೇರಿಸಲು ಹತ್ತಿರಕ್ಕೆ ತಂದರು. ಕೊನೆಯ ಓವರ್ನಲ್ಲಿ ಚೆನ್ನೈ 17 ರನ್ ಗಳಿಸಿದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೊಂದಿತ್ತು.
ಯಶ್ ದಯಾಳ್ ಎಸೆದ ಅಂತಿಮ ಓವರ್ನ ಮೊದಲ ಎಸೆತವನ್ನು ಧೋನಿ ಲಾಂಗ್ ಲೆಗ್ ಬೌಂಡರಿಯತ್ತ ಸಿಕ್ಸರ್ ಬಾರಿಸಿದರು. ಅದು ಬೌಂಡರಿಯಿಂದ ಹೊರಗೆ ಹೋಗಿದ್ದಲ್ಲದೆ, ಸ್ಟೇಡಿಯಂ ಛಾವಣಿಯನ್ನೂ ದಾಟಿ ಕ್ರೀಡಾಂಗಣದ ಹೊರಗೆ ತಲುಪಿತು. ಇದು 110 ಮೀಟರ್ ಉದ್ದದ ಸಿಕ್ಸರ್ ಆಗಿದ್ದು, ಈ ಋತುವಿನಲ್ಲಿ ದಾಖಲಾದ ಅತಿ ದೊಡ್ಡ ಸಿಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ನಂತರ, ದಯಾಳ್ ಮುಂದಿನ ಚೆಂಡನ್ನು ನಿಧಾನವಾಗಿ ಎಸೆದರು, ಧೋನಿ ಹೊಡೆತವು ನೇರವಾಗಿ ಫೀಲ್ಡರ್ ಕೈಗೆ ಹೋಯಿತು. ಉಳಿದ 4 ಎಸೆತಗಳಲ್ಲಿ ದಯಾಳ್ ಕೇವಲ 1 ರನ್ ನೀಡುವ ಮೂಲಕ ಆರ್ಸಿಬಿ ಪಂದ್ಯವನ್ನು ಗೆದ್ದುಕೊಂಡಿದ್ದು ಮಾತ್ರವಲ್ಲದೆ, ಪ್ಲೇ ಆಫ್ಗೆ ತಲುಪಿತು. (ಏಜೆನ್ಸೀಸ್)