

ಜೈಪುರ: ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಯಿಂದಾಗಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೌರಾಷ್ಟ್ರದ ವೇಗಿ ಜೈದೇವ್ ಉನಾದ್ಕತ್ ಐಪಿಎಲ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಸ್ಮಿತ್ ಅವರದಲ್ಲದೆ, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಜೋಸ್ ಬಟ್ಲರ್ ಕೂಡ ಐಪಿಎಲ್ ಟೂರ್ನಿಯ ಮೊದಲ ವಾರದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದರಿಂದಾಗಿ, ಈಗಾಗಲೆ ದೇಶೀಯ ಕ್ರಿಕೆಟ್ನಲ್ಲಿ ಸೌರಾಷ್ಟ್ರ ತಂಡದ ನಾಯಕರಾಗಿ ರಣಜಿ ಟ್ರೋಫಿ ಗೆದ್ದುಕೊಟ್ಟಿರುವ 28 ವರ್ಷದ ಎಡಗೈ ವೇಗಿ ಜೈದೇವ್ ಉನಾದ್ಕತ್ ಅವರಿಗೆ ತಂಡದ ಹಂಗಾಮಿ ಸಾರಥ್ಯವನ್ನು ನೀಡಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಚಿಂತನೆ ನಡೆಸಿದೆ.
ಜೈದೇವ್ ಉನಾದ್ಕತ್ 2018ರಲ್ಲಿ ಬರೋಬ್ಬರಿ 11.5 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸೇರಿದ್ದರು. ಅವರು ಬೆನ್ ಸ್ಟೋಕ್ಸ್ (12.5 ಕೋಟಿ ರೂ.) ಬಳಿಕ ಅತ್ಯಂತ ದುಬಾರಿ ಆಟಗಾರ ಎನಿಸಿದ್ದರು. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಟಿ20 ಸರಣಿ ಸೆಪ್ಟೆಂಬರ್ 16ರವರೆಗೂ ನಡೆಯಲಿದೆ. ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಶುರುವಾಗಲಿದೆ. ಆದರೆ ಇಂಗ್ಲೆಂಡ್ನಿಂದ ಯುಎಇಗೆ ಆಗಮಿಸಿದ ಬಳಿಕ ಆಟಗಾರರು ಕರೊನಾ ಪರೀಕ್ಷೆಗೆ ಒಳಪಡುವುದು ಅಗತ್ಯವಾಗಿರುವುದರಿಂದ, ಇದಕ್ಕೆ 7-10 ದಿನಗಳ ಕಾಲ ಬೇಕಾಗುತ್ತದೆ. ಹೀಗಾಗಿ ಟೂರ್ನಿಯ ಮೊದಲ 2-3 ಪಂದ್ಯಗಳಿಗೆ ಇಂಗ್ಲೆಂಡ್, ಆಸೀಸ್ ಆಟಗಾರರು ಅಲಭ್ಯರಾಗುವ ಭೀತಿ ಇದೆ.