

ಜೈಪುರ: ವಿವಿಧ ಬ್ರಾಂಡ್ಗಳ ಪ್ರಚಾರಕ್ಕೆ ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿ ಈಗಾಗಲೆ ದೊಡ್ಡ ವೇದಿಕೆಯಾಗಿ ಬಳಕೆಯಾಗಿದೆ. ಸಿಮೆಂಟ್ನಿಂದ ಸಾಫ್ಟ್ವೇರ್ ಡ್ರಿಂಕ್ಸ್, ಶೂನಿಂದ ಕಾಂಡೋಮ್ನವರೆಗೆ ವಿವಿಧ ಬ್ರಾಂಡ್ಗಳು ಐಪಿಎಲ್ನಲ್ಲಿ ಉತ್ತಮ ಪ್ರಚಾರವನ್ನು ಪಡೆದುಕೊಂಡಿವೆ. ಇದೀಗ ಈ ಪಟ್ಟಿಗೆ ಹೊಸ ವಸ್ತುವೊಂದು ಸೇರ್ಪಡೆಯಾಗುತ್ತಿದೆ. ಅದುವೇ ಸ್ಯಾನಿಟರಿ ಪ್ಯಾಡ್. ಮಹಿಳೆಯರ ಮುಟ್ಟಿನ ಸಮಸ್ಯೆಗಳ ಬಗ್ಗೆ ಪುರುಷರಿಗೂ ಅರಿವು ಮೂಡಿಸುವ ಮೂಲಕ ಹೊಸ ಸಾಮಾಜಿಕ ಬದಲಾವಣೆಯನ್ನು ತರುವುದು ಇದರ ಹಿಂದಿನ ಗುರಿಯಾಗಿದೆ.
ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 13ನೇ ಆವೃತ್ತಿಗೆ ಸ್ಯಾನಿಟರಿ ಪ್ಯಾಡ್ ಬ್ರಾಂಡ್ 'ನೈನ್' (ಎನ್ಐಐಎನ್ಇ)ಜತೆಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ತಂಡದ ಪ್ರಮುಖ ಆಟಗಾರರಾಗಿರುವ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಕೂಡ ಸ್ಯಾನಿಟರಿ ಪ್ಯಾಡ್ ಬ್ರಾಂಡ್ನ ಹೆಸರು ಹೊಂದಿರುವ ಜೆರ್ಸಿ ಧರಿಸಿ ಆಡಲಿದ್ದಾರೆ. ಆಟಗಾರರ ಜೆರ್ಸಿಯ ಬೆನ್ನಹಿಂದೆ ಈ ಬ್ರಾಂಡ್ನ ಹೆಸರು ಇರಲಿದೆ.
ಗ್ರಾಮೀಣ ಭಾಗಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸಾಮಾಜಿಕ ಪ್ರತಿಬಂಧನಗಳು ಈಗಲೂ ಮುಂದುವರಿದಿರುವ ನಡುವೆ, ಐಪಿಎಲ್ ತಂಡದ ಮೂಲಕ ಸಾಮಾಜಿಕ ಬದಲಾವಣೆ ತರುವುದು ಈ ಒಪ್ಪಂದದ ಉದ್ದೇಶವಾಗಿದೆ. 'ನಿಸ್ಸಂಶಯವಾಗಿ ಕ್ರಿಕೆಟ್ ದೇಶದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸುವ ಕ್ರೀಡೆಯಾಗಿದೆ. ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ತೋರಲು ಮತ್ತು ಹೊಸ ಸಾಮಾಜಿಕ ಬದಲಾವಣೆ ತರಲು ಐಪಿಎಲ್ ಟೂರ್ನಿ ಉತ್ತಮ ವೇದಿಕೆಯಾಗಿ ಬಳಕೆಯಾಗಲಿದೆ. ಮಹಿಳೆಯರ ಮುಟ್ಟಿನ ಸಮಸ್ಯೆಗಳ ಬಗ್ಗೆ ಪುರುಷರಿಗೆ ಶಿಕ್ಷಣ ನೀಡಲು ಪ್ರಯತ್ನಿಸಲಿದ್ದೇವೆ' ಎಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಒಪ್ಪಂದದ ಮೊತ್ತದ ಬಗ್ಗೆ ವಿವರಗಳನ್ನು ಬಿಟ್ಟುಕೊಡಲು ಫ್ರಾಂಚೈಸಿ ನಿರಾಕರಿಸಿದೆ.