

ನವದೆಹಲಿ: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಕಬಳಿಸಿದ ವಿಶ್ವದ ಮೊದಲ ವೇಗಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದರು. ಸದ್ಯಕ್ಕೆ ಅವರ ದಾಖಲೆ ಸುರಕ್ಷಿತವೆನಿಸಿದ್ದು, ಮುಂಬರುವ ದಿನಗಳಲ್ಲಿ ಭಾರತದ ವೇಗಿಯೊಬ್ಬರು ಈ ದಾಖಲೆಯನ್ನು ಮುರಿಯಬಲ್ಲರು ಎಂದು ವೆಸ್ಟ್ ಇಂಡೀಸ್ ವೇಗದ ಬೌಲಿಂಗ್ ದಿಗ್ಗಜ ಕರ್ಟ್ನಿ ವಾಲ್ಶ್ ಭವಿಷ್ಯ ನುಡಿದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಈ ಹಿಂದೆ ಭಾರತದ ವೇಗದ ಬೌಲಿಂಗ್ ಆಲ್ರೌಂಡರ್ ಕಪಿಲ್ ದೇವ್ (434 ವಿಕೆಟ್)ಅವರ ಹೆಸರಿನಲ್ಲಿಯೇ ಇತ್ತು. ಬಳಿಕ ಕರ್ಟ್ನಿ ವಾಲ್ಶ್ ಅವರೇ ಈ ದಾಖಲೆಯನ್ನು ಮುರಿದು ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಿದ ಮೊದಲ ವೇಗಿ ಎನಿಸಿದ್ದರು. ವಾಲ್ಶ್ (519) ದಾಖಲೆಯನ್ನು ಬಳಿಕ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಕ್ಗ್ರಾಥ್ (563) ಮುರಿದಿದ್ದರೆ, ಮೆಕ್ಗ್ರಾಥ್ ದಾಖಲೆಯನ್ನು ಮುರಿದು ಮುನ್ನಗ್ಗಿದ ಆಂಡರ್ಸನ್ ಅವರು ಈಗ 600 ವಿಕೆಟ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅವರ ಸಹ-ಆಟಗಾರರೇ ಆಗಿರುವ ಸ್ಟುವರ್ಟ್ ಬ್ರಾಡ್ (514) ಇತ್ತೀಚೆಗೆ 500 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದರು.
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೂ ಆಂಡರ್ಸನ್ ಅವರ ಎತ್ತರಕ್ಕೆ ಬೆಳೆಯಬಲ್ಲ ಸಾಮರ್ಥ್ಯ ಇದೆ ಎಂದು ಕರ್ಟ್ನಿ ವಾಲ್ಶ್ ಅವರು ಅಭಿಪ್ರಾಯಪಟ್ಟಿದ್ದಾರೆ. 2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಬುಮ್ರಾ ಉತ್ತಮವಾದ ಯಶಸ್ಸನ್ನೇ ಕಂಡಿದ್ದಾರೆ 26 ವರ್ಷದ ಅವರು ಇದುವರೆಗೆ ಆಡಿರುವ 14 ಟೆಸ್ಟ್ಗಳಲ್ಲಿ 68 ವಿಕೆಟ್ ಕಬಳಿಸಿದ್ದಾರೆ.
'ಆಂಡರ್ಸನ್ ಮತ್ತು ಬ್ರಾಡ್ ಅವರ ಎತ್ತರಕ್ಕೆ ಏರಬಲ್ಲ ಸಾಮರ್ಥ್ಯ ಬುಮ್ರಾ ಅವರಿಗೆ ಇದೆ. ಅವರು ಅತ್ಯಂತ ಕೌಶಲಯುಕ್ತ ಬೌಲರ್. ಅವರು ವಿಶಿಷ್ಟ ರನ್ಅಪ್ ಹೊಂದಿದ್ದು, ಕೆಲವರು ಅದನ್ನು ಬದಲಾಯಿಸಬೇಕೆಂದು ಬಯಸಿದ್ದಾರೆ. ಆದರೆ ಅವರಿಗೆ ಅದುವೇ ಉತ್ತಮವಾದುದು. ಅವರು ಫಿಟ್ ಆಗಿ ಉಳಿದರೆ, ಎಲ್ಲ 3 ಕ್ರಿಕೆಟ್ ಪ್ರಕಾರದಲ್ಲೂ ಅಮೋಘ ದಾಖಲೆ ಬರೆಯಬಲ್ಲರು. ಅವರು ಎಷ್ಟು ಸಮಯದವರೆಗೆ ಯಶಸ್ಸಿನ ಹಸಿವನ್ನು ಉಳಿಸಿಕೊಳ್ಳುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ' ಎಂದು ವಾಲ್ಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದೇ ವೇಳೆ ಆಂಡರ್ಸನ್ ಅವರ ಸಾಧನೆಯನ್ನು ಪ್ರಶಂಸಿಸಿರುವ ವಾಲ್ಶ್, 'ನಿಜಕ್ಕೂ ಇದೊಂದು ಅಮೋಘವಾದ ಸಾಧನೆ. ಟೆಸ್ಟ್ ಕ್ರಿಕೆಟ್ನಲ್ಲಿ 500-600 ವಿಕೆಟ್ಗಳನ್ನು ಕಬಳಿಸಲು ವೇಗದ ಬೌಲರ್ಗಳು ಭಾರಿ ಪರಿಶ್ರಮ ವಹಿಸುವುದು ಅಗತ್ಯ. ಇಷ್ಟು ವರ್ಷಗಳ ಕಠಿಣ ಪರಿಶ್ರಮಕ್ಕೆ ಅವರಿಗೆ ಪ್ರತಿಫಲ ದೊರೆತಿದೆ. ಅವರು ಈ ಸಾಧನೆಗೆ ನಿಜಕ್ಕೂ ಅರ್ಹರು. ಅವರು ಇನ್ನಷ್ಟು ಸಮಯ ಆಡಿ 700 ವಿಕೆಟ್ ಪೂರೈಸಲು ಬಯಸಿದ್ದಾರೆ ಎಂಬುದು ಇನ್ನೂ ವಿಶೇಷವಾದುದು' ಎಂದು ಹೇಳಿದ್ದಾರೆ.