ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ ಬದಲು ಕಣಕ್ಕಿಳಿಯಲಿದೆ ಆರ್​ಸಿಬಿ?

rcb-mi ipl
Published on

ದುಬೈ: ಐಪಿಎಲ್​ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡವನ್ನು ಚೆನ್ನೈ ಸೂಪರ್​ಕಿಂಗ್ಸ್​ ತಂಡ ಎದುರಿಸುವ ಸಾಧ್ಯತೆ ಇತ್ತು. ಆದರೆ ಸಿಎಸ್​ಕೆ ತಂಡದ ಸಿದ್ಧತೆಗೆ ಕರೊನಾ ವೈರಸ್​ನಿಂದ ಹಿನ್ನಡೆ ಎದುರಾಗಿರುವ ಕಾರಣದಿಂದಾಗಿ ಅದರ ಬದಲು ಆರ್​ಸಿಬಿ ತಂಡ ಕಣಕ್ಕಿಳಿಯುವ ನಿರೀಕ್ಷೆ ಮೂಡಿದೆ.

ಸೆಪ್ಟೆಂಬರ್​ 19ರಂದು ಟೂನಿರ್ಯ ಮೊದಲ ಪಂದ್ಯದಲ್ಲಿ ಸ್ಟಾರ್​ ಆಟಗಾರರು ಕಣಕ್ಕಿಳಿಯುವುದು ಅಗತ್ಯವಾಗಿದೆ. ಹೀಗಾಗಿ ಎಂಎಸ್​ ಧೋನಿ ಗೈರಿನಲ್ಲಿ ಮತ್ತೋರ್ವ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಸಾರಥ್ಯದ ಆರ್​ಸಿಬಿ ತಂಡವನ್ನು ರೋಹಿತ್​ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್​ ಎದುರು ಆಡಿಸಲು ಪರ್ಯಾಯ ಯೋಜನೆ ಸಿದ್ಧಗೊಂಡಿದೆ.

ಟೂರ್ನಿಗೆ ಇನ್ನು 3 ವಾರಗಳಷ್ಟೇ ಬಾಕಿ ಉಳಿದಿದ್ದು, ಉಳಿದೆಲ್ಲ ತಂಡಗಳ ಅಭ್ಯಾಸ ಈಗಾಗಲೆ ಆರಂಭಗೊಂಡಿದ್ದರೂ, ಸಿಎಸ್​ಕೆ ತಂಡ ಮಾತ್ರ ಇನ್ನೂ ಕ್ವಾರಂಟೈನ್​ನಲ್ಲೇ ಇದೆ. ಹೀಗಾಗಿ ಸೂಕ್ತ ಸಿದ್ಧತೆಗಳಿಲ್ಲದೆ ಸಿಎಸ್​ಕೆ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಾಗಿದೆ.

ಈ ಹಿಂದೆ ಧೋನಿ ನಿವೃತ್ತಿ ಪ್ರಕಟಿಸಿದಾಗ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​ ಶರ್ಮ ಅವರು ಸೆ. 19ರಂದು ಟಾಸ್​ ವೇಳೆ ಭೇಟಿಯಾಗೋಣ ಎಂದು ಬರೆದುಕೊಂಡಿದ್ದರು. ಆದರೆ ಅವರ ಆಸೆ ಈಗ ಈಡೇರುವ ಸಾಧ್ಯತೆ ಕಡಿಮೆಯಾಗಿದೆ. 2019ರ ಆವೃತ್ತಿಯ ರನ್ನರ್​ಅಪ್​ ಆಗಿರುವ ಕಾರಣಕ್ಕಾಗಿ ಚೆನ್ನೈ ಸೂಪರ್​ಕಿಂಗ್ಸ್​ ತಂಡಕ್ಕೆ ಉದ್ಘಾಟನಾ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ ಕರೊನಾ ಪ್ರಕರಣ, ಬಿಸಿಸಿಐ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು, ಆರ್​ಸಿಬಿ ತಂಡಕ್ಕೆ ಉದ್ಘಾಟನಾ ಪಂದ್ಯದಲ್ಲೇ ಆಡುವ ಅವಕಾಶ ಕಲ್ಪಿಸಿದೆ.

ಆರ್​ಸಿಬಿ ತಂಡ ಈ ಮುನ್ನ 2008ರ ಚೊಚ್ಚಲ ಆವೃತ್ತಿಯ ಐಪಿಎಲ್​ನಲ್ಲಿ ಕೆಕೆಆರ್​ ವಿರುದ್ಧ ಉದ್ಘಾಟನಾ ಪಂದ್ಯ ಆಡಿತ್ತು. ಬಳಿಕ 2017ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದೆದುರು ಉದ್ಘಾಟನಾ ಪಂದ್ಯವಾಡಿತ್ತು. 2019ರಲ್ಲಿ ಆರ್​ಸಿಬಿ ತಂಡ 2019ರಲ್ಲೂ ಚೆನ್ನೈ ಸೂಪರ್​ಕಿಂಗ್ಸ್ ವಿರುದ್ಧ ಉದ್ಘಾಟನಾ ಪಂದ್ಯವಾಡಿತ್ತು. ವಿಪರ್ಯಾಸವೆಂದರೆ ಆರ್​ಸಿಬಿ ಈ ಮೂರೂ ಉದ್ಘಾಟನಾ ಪಂದ್ಯಗಳಲ್ಲಿ ಸೋಲು ಕಂಡಿದೆ ಮತ್ತು ಉದ್ಘಾಟನಾ ಪಂದ್ಯವಾಡಿದ ಮೂರೂ ಟೂರ್ನಿಗಳಲ್ಲಿ ಪ್ಲೇಆಫ್​ಗೇರಲು ವಿಫಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net