More

    ಬಯೋ-ಬಬಲ್​ನಲ್ಲಿ ಇಂದಿನಿಂದ ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೆನಿಸ್​

    ನ್ಯೂಯಾರ್ಕ್​: ಕರೊನಾ ವೈರಸ್​ ಭೀತಿಯ ನಡುವೆ ಫ್ಲಶಿಂಗ್​ ಮೆಡೋಸ್​ನ ಬಯೋ-ಬಬಲ್​ನಲ್ಲಿ ಸೋಮವಾರದಿಂದ ಯುಎಸ್​ ಓಪನ್​ ಟೆನಿಸ್​ ಟೂರ್ನಿ ನಡೆಯಲಿದೆ. ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಗ್ರಾಂಡ್​ ಸ್ಲಾಂ ಇದಾಗಿದ್ದು, ಸ್ಟಾರ್​ ಆಟಗಾರರ ಕೊರತೆಯನ್ನೂ ಹೊಂದಿದೆ.

    ವಿಶ್ವ ನಂ. 1 ಆಟಗಾರ ನೊವಾಕ್​ ಜೋಕೊವಿಕ್​ ಮತ್ತು ಆತಿಥೇಯ ಅಮೆರಿಕದ ತಾರೆ ಸೆರೇನಾ ವಿಲಿಯಮ್ಸ್​ ಟೂರ್ನಿಯ ಇಬ್ಬರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಕರೊನಾ ಗೆದ್ದು ಬಂದಿರುವ ಜೋಕೊವಿಕ್​ 18ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಸೆರೇನಾ 24 ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಐತಿಹಾಸಿಕ ಸಾಧನೆಯ ಹಂಬಲದಲ್ಲಿದ್ದಾರೆ.

    ಸಾಮಾನ್ಯವಾಗಿ ವರ್ಷದ 4ನೇ ಹಾಗೂ ಅಂತಿಮ ಗ್ರಾಂಡ್​ ಸ್ಲಾಂ ಟೂರ್ನಿಯಾಗಿರುತ್ತಿದ್ದ ಯುಎಸ್​ ಓಪನ್​ ಈ ಬಾರಿ ವರ್ಷದ ಗ್ರಾಂಡ್​ ಸ್ಲಾಂ ಆಗಿದೆ. ವಿಂಬಲ್ಡನ್​ ರದ್ದಾಗಿರುವುದು ಮತ್ತು ಫ್ರೆಂಚ್​ ಓಪನ್​ ಸೆಪ್ಟೆಂಬರ್​-ಅಕ್ಟೋಬರ್​ಗೆ ಮುಂದೂಡಿಕೆಯಾಗಿರುವುದು ಇದಕ್ಕೆ ಕಾರಣ.

    ಇದನ್ನೂ ಓದಿ: ವಿರಾಟ್​ ಕೊಹ್ಲಿಗೆ ಸವಾಲೆಸೆಯಲು ಸಜ್ಜಾದ 600 ವಿಕೆಟ್​ ಸರದಾರ ಆಂಡರ್​ಸನ್​

    ಹಿಂದೆ ಸರಿದ ಸ್ಟಾರ್​ಗಳು
    ವಿಶ್ವದಲ್ಲಿ ಅತಿಹೆಚ್ಚು ಕರೊನಾ ಪ್ರಕರಣಗಳಿರುವ ದೇಶ ಅಮೆರಿಕ. ಇದರಿಂದ ಸಹಜವಾಗಿಯೇ ಇಲ್ಲಿಗೆ ಆಗಮಿಸಲು ಕೆಲವು ಸ್ಟಾರ್​ಗಳು ಹಿಂದೆ ಸರಿದಿದ್ದಾರೆ. ಇದರಲ್ಲಿ ಸ್ಪೇನ್​ ದಿಗ್ಗಜ ರಾಫೆಲ್​ ನಡಾಲ್​, ವಿಶ್ವ ನಂ. 1 ಆಟಗಾತಿರ್ ಆಶ್ಲೆಗ್​ ಬಾರ್ಟಿ ಪ್ರಮುಖರು. ಮಹಿಳಾ ಸಿಂಗಲ್ಸ್​ನಲ್ಲಿ ಅಗ್ರ 8ರಲ್ಲಿ 6 ಆಟಗಾತಿರ್ಯರು ಮತ್ತು ಒಟ್ಟಾರೆ 6 ಗ್ರಾಂಡ್​ ಸ್ಲಾಂ ಚಾಂಪಿಯನ್​ಗಳು ಹಿಂದೆ ಸರಿದಿದ್ದಾರೆ. ಸ್ವಿಸ್​ ದಿಗ್ಗಜ ರೋಜರ್​ ಫೆಡರರ್​ ಗಾಯದಿಂದಾಗಿ ಮತ್ತು ಮಹಿಳಾ ಸಿಂಗಲ್ಸ್​ ಹಾಲಿ ಚಾಂಪಿಯನ್​ ಬಿಯಾಂಕಾ ಆಂಡ್ರೆಸ್ಕು ಫಾರ್ಮ್​ ಕೊರತೆಯಿಂದ ಪಾಲ್ಗೊಳ್ಳುತ್ತಿಲ್ಲ.

    ಬಹುಮಾನ ಮೊತ್ತ ಕಡಿತ
    ಟೂರ್ನಿಗಳಲ್ಲಿ ವರ್ಷದಿಂದ ವರ್ಷಕ್ಕೆ ಬಹುಮಾನ ಮೊತ್ತ ಏರಿಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿ ಕರೊನಾದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯ ಬಹುಮಾನ ಮೊತ್ತವನ್ನು ಕಳೆದ ವರ್ಷಕ್ಕಿಂತ ಶೇ. 6.7ರಷ್ಟು ಕಡಿತಗೊಳಿಸಲಾಗಿದೆ. ಕಳೆದ ವರ್ಷ ಒಟ್ಟು 416 ಕೋಟಿ ರೂ. ಬಹುಮಾನ ವಿತರಣೆಯಾಗಿದ್ದರೆ, ಈ ಬಾರಿಯ ಒಟ್ಟು ಬಹುಮಾನ 390 ಕೋಟಿ ರೂಪಾಯಿ. ಸಿಂಗಲ್ಸ್​ ವಿಭಾಗದ ವಿಜೇತರು ಕಳೆದ ವರ್ಷಕ್ಕಿಂತ ಶೇ. 22ರಷ್ಟು ಕಡಿಮೆ ಅಂದರೆ 21.93 ಕೋಟಿ ರೂ. ಬಹುಮಾನ ಪಡೆಯಲಿದ್ದಾರೆ. ಆದರೆ ಮೊದಲ ಸುತ್ತಿನಲ್ಲಿ ನಿರ್ಗಮಿಸುವ ಆಟಗಾರರಿಗೆ ನಿಡುವ ಬಹುಮಾನ ಮೊತ್ತವನ್ನು ಅಲ್ಪ ಏರಿಕೆ ಮಾಡಲಾಗಿದೆ.

    ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು
    ಫುಟ್​ಬಾಲ್​, ಕ್ರಿಕೆಟ್​ ಮತ್ತಿತರ ಕ್ರೀಡೆಗಳಂತೆ ಟೆನಿಸ್​ ಕೂಡ ವೈರಸ್​ ಭೀತಿಯಿಂದಾಗಿ ಪ್ರೇಕ್ಷಕರನ್ನು ದೂರವಿಟ್ಟು ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತಿದೆ. ಟೂರ್ನಿ ನಡೆಯಲಿರುವ ಯುಎಸ್​ ನ್ಯಾಷನಲ್​ ಟೆನಿಸ್​ ಸೆಂಟರ್​ ಕೆಲ ತಿಂಗಳ ಹಿಂದೆ ಕೋವಿಡ್​-19 ಚಿಕಿತ್ಸಾ ಆಸ್ಪತ್ರೆಯಾಗಿತ್ತು. ಟೂರ್ನಿಗೆ ಮುನ್ನ ಎಲ್ಲ ಆಟಗಾರರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬಯೋ-ಬಬಲ್​ ನಿಯಮ ಉಲ್ಲಂಘಿಸುವ ಆಟಗಾರರು ಟೂರ್ನಿಯಿಂದಲೇ ಹೊರಬೀಳಲಿದ್ದಾರೆ.

    ಭಾರತೀಯರೂ ಭಾಗಿ
    ಕರೊನಾ ಭೀತಿಯಿಂದ ಸಾನಿಯಾ ಮಿರ್ಜಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಭಾರತೀಯರು ಕಣಕ್ಕಿಳಿಯುತ್ತಿದ್ದಾರೆ. ಸಿಂಗಲ್ಸ್​ನಲ್ಲಿ ಸುಮಿತ್​ ನಗಾಲ್​ ಮತ್ತು ಡಬಲ್ಸ್​ನಲ್ಲಿ ರೋಹನ್​ ಬೋಪಣ್ಣ ಮತ್ತು ದಿವಿಜ್​ ಶರಣ್​ ಆಡಲಿದ್ದಾರೆ.

    ಪಂದ್ಯಗಳು ಆರಂಭ: ರಾತ್ರಿ 8.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ಸೆಲೆಕ್ಟ್​ 1, 2.

    ಕರೊನಾ ಭೀತಿಯ ನಡುವೆ ಶೂಟಿಂಗ್​ಗೆ ಹಾಜರಾಗಿ ಟೀಕೆ ಎದುರಿಸಿದ ಕ್ರಿಸ್​ ಗೇಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts