

ನವದೆಹಲಿ: ಟೀಮ್ ಇಂಡಿಯಾದ ಅಗ್ರ ವೇಗಿ ಜಸ್ಪ್ರೀತ್ ಬುಮ್ರಾ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡುವ ನಿರೀಕ್ಷೆ ಇದೆ. ಕಳೆದ ವರ್ಷ ಹಿರಿತನದ ಆಧಾರದಲ್ಲಿ ರವೀಂದ್ರ ಜಡೇಜಾ ಹೆಸರು ಅಂತಿಮಗೊಂಡಿದ್ದರಿಂದ ಬುಮ್ರಾಗೆ ಅದೃಷ್ಟ ಕೈಕೊಟ್ಟಿತ್ತು. ಈ ವರ್ಷ ಪ್ರಶಸ್ತಿಗೆ ಮತ್ತೋರ್ವ ಆಟಗಾರನಾಗಿ ಎಡಗೈ ಆರಂಭಿಕ ಶಿಖರ್ ಧವನ್ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ.
ಈ ಬಾರಿ ಯಾರ ಹೆಸರನ್ನು ಶಿಫಾರಸು ಮಾಡಬೇಕೆಂಬ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆದರೆ ಕಳೆದ 4 ವರ್ಷಗಳಲ್ಲಿ ತೋರಿರುವ ಅಮೋಘ ನಿರ್ವಹಣೆಯನ್ನು ಪರಿಗಣಿಸಿ ಗುಜರಾತ್ನ ವಿಶಿಷ್ಟ ಬೌಲಿಂಗ್ ಶೈಲಿಯ ವೇಗಿ ಬುಮ್ರಾ ಹೆಸರನ್ನು ಶಿಫಾರಸು ಮಾಡುವ ಲಕ್ಷಣ ಗೋಚರಿಸಿದೆ. 2ನೇ ಆಯ್ಕೆಯಾಗಿ ಧವನ್ ಹೆಸರು ಶಿಫಾರಸುಗೊಳ್ಳಬಹುದು. ಈ ಹಿಂದೆ 2018ರಲ್ಲೂ ಧವನ್ ಹೆಸರು ಶಿಫಾರಸುಗೊಂಡಿತ್ತು. ಆದರೆ ಆಗ ಧವನ್ಗೆ ಪ್ರಶಸ್ತಿ ಒಲಿದಿರಲಿಲ್ಲ.
ಕಳೆದ ವರ್ಷ ಬಿಸಿಸಿಐ ಬುಮ್ರಾ, ಜಡೇಜಾ ಮತ್ತು ಶಮಿ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿತ್ತು. ಆದರೆ ಬುಮ್ರಾ ಆಗಿನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2 ವರ್ಷವಷ್ಟೇ ಪೂರ್ಣಗೊಳಿಸಿದ್ದರು. ಪ್ರಶಸ್ತಿಯ ಮಾನದಂಡದ ಅನ್ವಯ, ಕಳೆದ 3 ವರ್ಷಗಳ ನಿರ್ವಹಣೆಯನ್ನು ಪರಿಗಣಿಸಲಾಗುತ್ತದೆ. 3 ವರ್ಷ ಪೂರ್ಣಗೊಂಡಿರದ ಕಾರಣ ಬುಮ್ರಾಗೆ ಹಿನ್ನಡೆಯಾಗಿತ್ತು ಮತ್ತು ಅವರಿಗಿಂತ ಹಿರಿಯ ಆಟಗಾರರಾದ ಜಡೇಜಾಗೆ ಪ್ರಶಸ್ತಿ ಒಲಿದಿತ್ತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮಹಿಳೆಯರ ವಿಭಾಗದಿಂದ ಆಲ್ರೌಂಡರ್ ದೀಪ್ತಿ ಶರ್ಮ ಮತ್ತು ಅನುಭವಿ ವೇಗಿ ಶಿಖಾ ಪಾಂಡೆ ಹೆಸರು ಶಿಫಾರಸುಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಬಿಸಿಸಿಐಗೆ 4 ಸಾವಿರ ಕೋಟಿ ರೂಪಾಯಿ ನಷ್ಟ?
26 ವರ್ಷದ ಬುಮ್ರಾ ಇದುವರೆಗೆ 14 ಟೆಸ್ಟ್ ಆಡಿದ್ದು 68 ವಿಕೆಟ್ ಕಬಳಿಸಿದ್ದಾರೆ. 64 ಏಕದಿನಗಳಲ್ಲಿ 104 ಮತ್ತು 50 ಟಿ20 ಪಂದ್ಯಗಳಲ್ಲಿ 59 ವಿಕೆಟ್ ಗಳಿಸಿದ್ದಾರೆ. ಇದೀಗ ಏಕದಿನ ರ್ಯಾಂಕಿಂಗ್ನಲ್ಲಿ ನಂ. 1 ಬೌಲರ್ ಆಗಿರುವ ಬುಮ್ರಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದ ಏಷ್ಯಾದ ಮೊದಲ ಬೌಲರ್ ಎಂಬ ಸಾಧನೆಯನ್ನೂ ಮಾಡಿದ್ದಾರೆ. -ಪಿಟಿಐ
ವೇಗಿ ಮೊಹಮದ್ ಶಮಿ ಹೆಸರು ಕಳೆದ ವರ್ಷ ಶಿಫಾರಸುಗೊಂಡು ಪ್ರಶಸ್ತಿ ಕೈತಪ್ಪಿದ್ದರೂ, ಈ ವರ್ಷ ಮತ್ತೆ ಶಿಫಾರಸುಗೊಳ್ಳುವ ಸಾಧ್ಯತೆ ಇಲ್ಲ. ಅವರ ವಿರುದ್ಧ ಪತ್ನಿ ಹಸಿನ್ ಜಹಾನ್ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧದ ಪ್ರಕರಣ ದಾಖಲಿಸಿರುವುದರಿಂದ ಅವರು ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ನಿಯಮದ ಅನ್ವಯ, ಕ್ರೀಡಾಪಟುಗಳ ವಿರುದ್ಧ ಯಾವುದೇ ಪೊಲೀಸ್ ಕೇಸ್ಗಳು ಇರಬಾರದು.
ಹಾಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಆರ್. ಅಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಈಗಾಗಲೆ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಹೀಗಾಗಿ ತಂಡದ ಹಿರಿತನದ ಆಧಾರದಲ್ಲಿ ಈ ಬಾರಿ ಧವನ್ ಹೆಸರು ಕೂಡ ಶಿಫಾರಸುಗೊಳ್ಳಬಹುದು. ಆದರೆ, ಕಳೆದ ಒಂದು ವರ್ಷದಿಂದ ಅವರು ವಿವಿಧ ಗಾಯಗಳಿಂದಾಗಿ ಸಾಕಷ್ಟು ಸಮಯ ಮೈದಾನದಿಂದ ಹೊರಗುಳಿದಿರುವ ಕಾರಣ, ಪ್ರಶಸ್ತಿ ಒಲಿಸಿಕೊಳ್ಳುವುದು ಕಠಿಣವೆನಿಸಿದೆ. 2018ರಲ್ಲಿ ಸ್ಮೃತಿ ಮಂದನಾಗೆ ಮಾತ್ರ ಕ್ರಿಕೆಟ್ ವಿಭಾಗದಿಂದ ಪ್ರಶಸ್ತಿ ಲಭಿಸಿತ್ತು.