ವಿಕೆಟ್​ಗೆ​ ಅಡ್ಡಲಾದ ಜಡೇಜಾ ಕಡೆಗೂ​ ಔಟ್​! ಅಂಪೈರ್​ ತೀರ್ಪಿಗೆ ಜಡ್ಡು ಸಿಟ್ಟು, ನಮಗಂತೂ ಬಹಳ ಖುಷಿ ಆಯ್ತು…

WhatsApp Image 2024-05-13 at 11.13.55 AM
Published on

ಚೆನ್ನೈ: ನಿನ್ನೆ (ಮೇ.12) ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಭಾರೀ ಹಣಾಹಣಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಚೆನ್ನೈ ಪಡೆ ಗೆದ್ದು ಬೀಗಿತು. ಐದು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ ಸಿಎಸ್​ಕೆ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡು, ಪ್ಲೇಆಫ್ ಪ್ರವೇಶಿಸುವ ಭರವಸೆ ಹೊಂದಿದೆ. ಸದ್ಯ ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದ್ದೇ ಆದರೂ ಚೇಸಿಂಗ್​ ವೇಳೆ ರವೀಂದ್ರ ಜಡೇಜಾ ಔಟ್​ ಆದ ಕ್ಷಣವನ್ನು ಮಾತ್ರ ನೆಟ್ಟಿಗರು ಸಂಭ್ರಮಿಸಿ, ಟೀಕಿಸಿದ್ದಾರೆ.

ಮೊದಲು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್​​ ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಸಿಎಸ್​ಕೆಗೆ ಬೌಲ್​​ ಮಾಡುವಂತೆ ತಿಳಿಸಿತು. 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 140 ರನ್ ಗಳಿಸಲು ಮಾತ್ರ ಆರ್​ಆರ್​ ಶಕ್ತವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆ ಪರ ಡ್ಯಾರಿಯಲ್ ಮಿಚೆಲ್, ಗಾಯಕ್ವಾಡ್​ ಆಕರ್ಷಕ ಬ್ಯಾಟಿಂಗ್ ಅನೇಕರ ಮೆಚ್ಚುಗೆಗೆ ಕಾರಣವಾದರೆ, ಆಲ್​ರೌಂಡರ್​ ರವೀಂದ್ರ ಜಡೇಜಾ ಒಂದು ರನ್​ ಹೊಡೆದು ಮತ್ತೊಂದು ರನ್​ಗೆ ಹಿಂತಿರುಗುವಾಗ ವಿಕೆಟ್​ಗೆ ಅಡ್ಡಲಾಗಿ ಔಟ್​ ಆಗಿದ್ದು, ಸದ್ಯ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿಕೆಟ್​ಗೆ ಅಡ್ಡಲಾಗಿ ನಾನ್​ ಸ್ಟ್ರೈಕರ್​ ಎಂಡ್​ಗೆ ಓಡಿ ಬರುತ್ತಿದ್ದ ಜಡೇಜಾ ಬೆನ್ನಿಗೆ ತಗುಲಿದ ಕೀಪರ್ ಸಂಜು ಸ್ಯಾಮ್ಸನ್​ ಎಸೆದ ಬಾಲ್, ನೇರವಾಗಿ ವಿಕೆಟ್​ಗೆ ಇಟ್ಟ ಗುರಿಯಾಗಿತ್ತು. ​ಆದರೆ, ಸಂಜು ಬೀಸಿದ ಬಾಲ್​ ವಿಕೆಟ್​ಗೆ ಬೀಳದೆ, ನೇರವಾಗಿ ಜಡೇಜಾ ಬೆನ್ನಿಗೆ ಬಿದ್ದಿತು. ಅಸಲಿಗೆ ಔಟ್ ಅಲ್ವಾ? ಎಂದು ಆರ್​ಆರ್​ ಪ್ರಶ್ನಿಸಿದ್ರೆ, ಜಡೇಜಾ ಮಾತ್ರ ಇಲ್ಲ ಎಂದೇ ತಲೆ ಆಡಿಸಿದರು. ಇದರಿಂದ ಎರಡು ತಂಡಗಳ ನಡುವೆ ಉಂಟಾದ ತೀವ್ರ ಗೊಂದಲಕ್ಕೆ ಅಂಪೈರ್ ಕೊಟ್ಟ ಅಂತಿಮ​ ನಿರ್ಣಯ ಬಹಳ ಶಾಕಿಂಗ್ ಆಗಿತ್ತು.

ಹಲವು ಬಾರಿ ಪರಿಶೀಲಿಸಿ ನೋಡಿದ ಬಳಿಕ ಕಡೆಗೂ ಜಡೇಜಾ ಔಟ್ ಎಂದು ತೀರ್ಪು ನೀಡಿದ ಅಂಪೈರ್​ ವಿರುದ್ಧ ಜಡ್ಡು ಗರಂ ಆಗಿ, ಪೆವಿಲಿಯನ್​ನತ್ತ ಹೊರನಡೆದರು. ಜಡೇಜಾ ಔಟ್ ಆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಈ ರೀತಿ ಫೀಲ್ಡ್​ಗೆ ಅಡ್ಡಲಾಗಿರುವುದು ಇದು ಮೂರನೇ ಬಾರಿ. ಜಡೇಜಾಗೆ ತಕ್ಕ ಶಾಸ್ತಿಯೇ ಆಗಿದೆ. ಎಲ್ಲಾ ತಂಡಗಳು ಎಸ್​ಆರ್​ಎಚ್ ಆಗಿರುವುದಿಲ್ಲ ಬಿಟ್ಟುಕೊಡೋದಿಕ್ಕೆ, ಇಲ್ಲಿಯ ತನಕ ಅಂಪೈರ್​ಗಳು ಕೊಟ್ಟ ನಿರ್ಣಯದಲ್ಲಿ ಇದೇ ಬೆಸ್ಟ್​, ನಮಗಂತೂ ಬಹಳ ಖುಷಿಯಾಯಿತು ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net