

ಚೆನ್ನೈ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, 16 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 17ನೇ ಆವೃತ್ತಿಗೆ ಕಾಲಿಟ್ಟಿದೆ. ಟೂರ್ನಿಗೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ವರ್ಣರಂಜಿತ ಚಾಲನೆ ದೊರೆಯಲಿದ್ದು, 10 ತಂಡಗಳ ನಾಯಕರುಗಳು ಟ್ರೋಫಿಯೊಂದಿಗೆ ಫೋಸ್ ನೀಡಿದ್ದಾರೆ.
ಚೆನ್ನೈ ಸೂಪರ್ಕಿಂಗ್ಸ್ ತಂಡದ ನೂತನ ನಾಯಕ ಋಉತುರಾಜ್ ಗಾಯಕ್ವಾಡ್ ಟ್ರೋಫಿ ಅನಾವರಣ ಕಾರ್ಯಕ್ರಮದ ಫೋಟೊಶೂಟ್ ವೇಳೆ ಕಾಣಿಸಿಕೊಂಡಿದ್ದು, ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅವರ ಬದಲು ಉಪನಾಯಕನಾಗಿರುವ ಜಿತೇಶ್ ಶರ್ಮ ಅವರು ಟ್ರೋಫಿ ಫೋಟೊಶೂಟ್ನಲ್ಲಿ ತಂಡವನ್ನು ಪ್ರತಿನಿಧಿಸಿದ್ಧಾರೆ. ಉಳಿದಂತೆ ಎಲ್ಲ 9 ತಂಡಗಳ ನಾಯಕರು ಹಾಜರಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ.
ಈ ಹಿಂದೆಯೂ ಧೋನಿ ನಾಯಕತ್ವದಿಂದ ಕೆಳಗಿಳಿದು ರವೀಂದ್ರ ಜಡೇಜಾಗೆ ನಾಯಕತ್ವ ನೀಡಿದ್ದರು. ಆದರೆ ತಂಡ ಹಿಂದೆಂದು ಕಾಣಣ ಘೋರ ವೈಫಲ್ಯ ಕಂಡಿತ್ತು. ಹೀಗಾಗಿ ಅರ್ಧದಲ್ಲೇ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡಿದ್ದರು. ಈ ಬಾರಿ ಧೋನಿ ವಿದಾಯವನ್ನು ಹೇಳಲಿದ್ಧಾರೆ ಎಂದು ತಿಳಿದು ಬಂದಿದ್ದು, ಇದಕ್ಕೂ ಮುನ್ನ ತಂಡದ ಭವಿಷ್ಯದ ನಿಟ್ಟಿನಲ್ಲಿ ಯುವ ಆಟಗಾರನಾಗಿರುವ ಋತುರಾಜ್ ಗಾಯಕ್ವಾಡ್ಗೆ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ.
ಮಾರ್ಚ್ 22ರಂದು ನಡೆಯುವ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ಸೋನು ನಿಗಮ್, ಟೈಗರ್ ಶ್ರಾಫ್, ಅಕ್ಷಯ್ ಕುಮಾರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಖಾಮುಖಿಯಾಗಲಿವೆ.