ಚಾಂಪಿಯನ್ಸ್​ ಟ್ರೋಫಿ ಫೈನಲ್​ ಲಾಹೋರ್​ನಲ್ಲಿ ನಡೆಯಲಿ ಎಂದ ಪಾಕ್​ ಪತ್ರಕರ್ತ: BCCI ಕೊಟ್ಟ ಖಡಕ್​ ಉತ್ತರ ಹೀಗಿತ್ತು...

BCCI
Published on

BCCI : ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸಾಧನೆ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಡಕ್​ ಉತ್ತರವನ್ನು ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ಭಾರತ ತಂಡ ದುಬೈನಲ್ಲಿ ಆಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರು ಕೂಡ ಈಗಾಗಲೇ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಟೀಮ್​ ಇಂಡಿಯಾವನ್ನು ಟೀಕಿಸಿದ್ದಾರೆ. ಟೀಮ್ ಇಂಡಿಯಾ ಎಲ್ಲಿಯೂ ಪ್ರಯಾಣಿಸದೇ ಒಂದೇ ಸ್ಥಳದಲ್ಲಿ ಇರುವುದು ಮತ್ತು ಒಂದೇ ಸ್ಥಳದಲ್ಲಿ ಆಡುತ್ತಿರುವುದರಿಂದ ಹೆಚ್ಚುವರಿ ಪ್ರಯೋಜನವನ್ನು ಪಡೆಯುತ್ತಿದೆ ಎಂದು ಅನೇಕರು ಆರೋಪ ಮಾಡಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ರಾಜೀವ್​​ ಶುಕ್ಲಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರ್ಧಾರದಂತೆ ಭಾರತ, ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡುತ್ತಿದೆ. ಗೆಲುವಿಗಾಗಿ ಪಿಚ್‌ಗಳನ್ನು ಅವಲಂಬಿಸಿರುವ ಸ್ಥಿತಿಯಲ್ಲಿ ಟೀಮ್ ಇಂಡಿಯಾ ಇಲ್ಲ. ಸ್ಥಳ ಒಂದೇ ಆಗಿದ್ದರೂ, ಅವರು ವಿಭಿನ್ನ ಪಿಚ್‌ಗಳಲ್ಲಿ ಆಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು ಎಂದರು.

ಐಸಿಸಿ ನಿಯಮಗಳ ಅನುಸಾರ ಲಾಹೋರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಹಾಜರಾದ ರಾಜೀವ್ ಶುಕ್ಲಾ, ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಹೇಳಿಕೆಗಳನ್ನು ನೀಡಿದರು.

ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯ ಬಗ್ಗೆ ಮಾತನಾಡಿದ ಶುಕ್ಲಾ, ನಾವು ಭಾರತ ಸರ್ಕಾರದ ನಿರ್ಧಾರದ ಪ್ರಕಾರ ಕಾರ್ಯನಿರ್ವಹಿಸುತ್ತೇವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕೂಡ ಅವರ ಸರ್ಕಾರ ಹೇಳಿದಂತೆ ಮಾಡುತ್ತದೆ ಎಂದರು. ಭಾರತ ಮತ್ತು ಪಾಕಿಸ್ತಾನದ ಕ್ರೀಡಾಭಿಮಾನಿಗಳು ಉಭಯ ದೇಶಗಳು ದ್ವಿಪಕ್ಷೀಯ ಸರಣಿಯನ್ನು ನೋಡಲು ಬಯಸುತ್ತಾರೆ ಎಂಬುದು ನಮಗೂ ತಿಳಿದಿದೆ. ಆದರೆ, ಇಲ್ಲಿ ಆಯಾ ಸರ್ಕಾರಗಳು ಸಂದರ್ಭಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಐಸಿಸಿಯಲ್ಲಿ ಒಂದು ನಿಯಮವಿದೆ. ಅದೇನೆಂದರೆ, ಮಂಡಳಿಗಳು ಸರ್ಕಾರಗಳ ಒಪ್ಪಿಗೆಯೊಂದಿಗೆ ಮುಂದುವರಿಯಬೇಕು. ಬಿಸಿಸಿಐ ಮತ್ತು ಪಿಸಿಬಿ ಆ ನಿಯಮವನ್ನು ಅನುಸರಿಸುತ್ತಿವೆ ಎಂದು ಶುಕ್ಲಾ ಹೇಳಿದರು.

ಭಾರತ-ಪಾಕಿಸ್ತಾನ ಪಂದ್ಯಗಳ ಜನಪ್ರಿಯತೆಯನ್ನು ಗಮನಿಸಿದರೆ, ಪ್ರತಿಯೊಂದು ದೇಶವೂ ಸೋದರಸಂಬಂಧಿಯ ಕಾದಾಟವನ್ನು ಆಯೋಜಿಸಲು ಬಯಸುತ್ತದೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದಾಗ್ಯೂ, ಬಹಳ ಸಮಯದ ನಂತರ, ಪಾಕಿಸ್ತಾನವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಇದು ಒಳ್ಳೆಯ ಬೆಳವಣಿಗೆ. ಅವರು ಪಂದ್ಯಾವಳಿಯನ್ನು ಸುಗಮವಾಗಿ ನಡೆಸುವಂತೆ ನೋಡಿಕೊಂಡರು ಎಂದು ರಾಜೀವ್ ಶುಕ್ಲಾ ಪಿಸಿಬಿಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ರಾಜೀವ್ ಶುಕ್ಲಾ ಅವರನ್ನು ಚಾಂಪಿಯನ್ಸ್ ಟ್ರೋಫಿ ಫೈನಲ್ ಲಾಹೋರ್‌ನಲ್ಲಿ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೇಳಿದರು. ಇದಕ್ಕೆ ಪ್ರತಿಯಾಗಿ ರಾಜೀವ್ ಶುಕ್ಲಾ, ನೀವು ಹೇಳಿದಂತೆ ನಡೆಯಬೇಕಿದ್ದರೆ, ಆಸ್ಟ್ರೇಲಿಯಾ ಗೆಲ್ಲಬೇಕಿತ್ತು. ಆದರೆ, ಅವರು ಸೋತಿದ್ದಾರೆ. ಹೀಗಾಗಿ ಫೈನಲ್​ ಪಂದ್ಯ ದುಬೈನಲ್ಲಿ ನಡೆಯಲಿದೆ ಎಂದು ಖಡಕ್​ ಉತ್ತರ ನೀಡಿದರು.

ಇನ್ನು ಏಷ್ಯಾ ಕಪ್ ವೇಳಾಪಟ್ಟಿಯ ವಿಷಯಕ್ಕೆ ಬಂದರೆ, ರಾಜೀವ್ ಶುಕ್ಲಾ ಮಾತನಾಡಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧಾರಗಳ ಪ್ರಕಾರ ಎಲ್ಲವೂ ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಕೂಡ ಈ ವಿಷಯದಲ್ಲಿ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.

ಅಂದಹಾಗೆ ಟೀಮ್​ ಇಂಡಿಯಾ ಸತತ ಗೆಲುವುಗಳೊಂದಿಗೆ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಅಂತಿಮ ಹಣಾಹಣಿಗೆ ರೆಡಿಯಾಗುತ್ತಿದೆ. ಫೈನಲ್​ನಲ್ಲಿ ರೋಹಿತ್​ ಶರ್ಮ ಪಡೆ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದ್ದು, ಮಾರ್ಚ್​ 9ರಂದು ದುಬೈ ಕ್ರೀಡಾಂಗಣದಲ್ಲಿ ಫೈನಲ್​ ಪಂದ್ಯ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net