

ಪೊಲಿಟಿಕಲ್ ಕಿಡಾಗೆ ಮಣಿಶಂಕರ್ ಅಯ್ಯರ್ ನೀಡಿರುವ ಸಂದರ್ಶನದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಮಾತನಾಡಿರುವ ಅಯ್ಯರ್, ರಾಜೀವ್ ಗಾಂಧಿ ಪ್ರಧಾನಿಯಾದಾಗ, ವಿಮಾನ ಪೈಲಟ್ ಆಗಿದ್ದವನು ಮತ್ತು ಪರೀಕ್ಷೆಯಲ್ಲಿ ಎರಡು ಬಾರಿ ಫೇಲಾದ ವ್ಯಕ್ತಿಯೊಬ್ಬ ಪ್ರಧಾನಿಯಾಗಲು ಹೇಗೆ ಸಾಧ್ಯ ಎಂದು ನಾನು ಯೋಚಿಸಿದೆ? ಎಂದಿದ್ದಾರೆ.
ಮಾತು ಮುಂದುವರಿಸಿರುವ ಅಯ್ಯರ್, ನಾನು ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಜತೆಯಲ್ಲೇ ಓದಿದೆ. ಅಲ್ಲಿ ಆತ ಫೇಲ್ ಆದ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಫೇಲ್ ಆಗುವುದು ತುಂಬಾನೇ ವಿರಳ. ಏಕೆಂದರೆ ವಿಶ್ವವಿದ್ಯಾಲಯವು ಎಲ್ಲರೂ ಕನಿಷ್ಠ ಪಕ್ಷ ಪಾಸ್ ಆಗುವಂತೆ ನೋಡಿಕೊಳ್ಳುತ್ತದೆ. ಆದರೂ ರಾಜೀವ್ ಗಾಂಧಿ ಫೇಲ್ ಆದರು ಎಂದು ಅಯ್ಯರ್ ತಿಳಿಸಿದರು.
ಇದಾದ ಬಳಿಕ ರಾಜೀವ್ ಗಾಂಧಿ ಅವರು ಲಂಡನ್‌ನ ಇಂಪಿರಿಯಲ್ ಕಾಲೇಜಿಗೆ ಹೋದರು ಮತ್ತು ಅಲ್ಲಿಯೂ ಫೇಲ್ ಆದರು. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗಲು ಹೇಗೆ ಸಾಧ್ಯ ಎಂದು ನಾನಾಗ ಯೋಚಿಸಿದೆ ಅಂತ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಅವರ ಹೇಳಿಕೆ ಇದೀಗ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ಪಕ್ಷಕ್ಕಂತೂ ಇದು ಅಸ್ತ್ರವಾಗಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಈ ವಿಡಿಯೋವನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇಷ್ಟೊಂದು ಶೈಕ್ಷಣಿಕ ದಾಖಲೆ ಹೊಂದಿರುವ ವ್ಯಕ್ತಿ ಪ್ರಧಾನಿಯಾಗಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. "ಮುಸುಕು ಕಳಚಲಿ" ಎಂದು ಟ್ವೀಟ್ ಮಾಡಿದ್ದಾರೆ.
ಇದರ ಮಧ್ಯೆ ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್, ರಾಜೀವ್ ಗಾಂಧಿಯವರ ಶೈಕ್ಷಣಿಕ ದಾಖಲೆಗಿಂತ ಅವರ ರಾಜಕೀಯ ಮತ್ತು ಪ್ರಧಾನಿಯಾಗಿ ಅವರು ಮಾಡಿದ ಕೆಲಸದ ಆಧಾರದ ಮೇಲೆ ಅವರ ಯಶಸ್ಸನ್ನು ನಿರ್ಣಯಿಸುವಂತೆ ಒತ್ತಾಯಿಸಿದೆ. ಫೇಲ್ ಆಗುವುದು ದೊಡ್ಡ ವಿಷಯವೇನಲ್ಲ, ಅತ್ಯುತ್ತಮ ವ್ಯಕ್ತಿಗಳು ಸಹ ಕೆಲವೊಮ್ಮೆ ಫೇಲ್ ಆಗುತ್ತಾರೆ ಎಂದು ಅಯ್ಯರ್ ಅವರ ವಿಡಿಯೋಗೆ ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಪ್ರತಿಕ್ರಿಯಿಸಿದ್ದಾರೆ.
ರಾಜೀವ್ ಗಾಂಧಿ ಅವರು ರಾಜಕೀಯದಲ್ಲಿ ಫೇಲ್ ಆಗಲಿಲ್ಲ. ಅವರಿಗೆ ರಾಜಕೀಯ ಜವಾಬ್ದಾರಿಯನ್ನು ನೀಡಿ ಪ್ರಧಾನಿ ಮಾಡಿದಾಗ, ನಮ್ಮ ದೇಶದಲ್ಲಿ ಕೇವಲ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಯಿತು. ಕಡಿಮೆ ಅವಧಿಯಲ್ಲಿ ಇಷ್ಟೊಂದು ಸಾಧನೆ ಮಾಡಿದ ಪ್ರಧಾನ ಮಂತ್ರಿಗಳು ಬಹಳ ಕಡಿಮೆ ಇದ್ದಾರೆ ಎಂದು ನಾನು ನಂಬುತ್ತೇನೆ ಎಂದು ಅನ್ವರ್ ಹೇಳಿದ್ದಾರೆ.
ಇನ್ನು ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಇಂಡಿಯಾ ಟುಡೇ ಜೊತೆ ಮಾತನಾಡಿರುವ ಮಣಿಶಂಕರ್ ಅಯ್ಯರ್, ರಾಜೀವ್ ಗಾಂಧಿ ತಮ್ಮ ಶೈಕ್ಷಣಿಕ ದಾಖಲೆಯ ಬಗ್ಗೆ ಮುಕ್ತವಾಗಿದ್ದರು ಮತ್ತು ಅದನ್ನು ಎಂದಿಗೂ ಮರೆಮಾಡಲು ಪ್ರಯತ್ನಿಸಲಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
45 ವರ್ಷಗಳ ಹಿಂದೆ ರಾಜೀವ್ ಗಾಂಧಿಯವರು ಒಂದು ಸಂದರ್ಶನದಲ್ಲಿ ಕೇಂಬ್ರಿಡ್ಜ್‌ನಲ್ಲಿ ತಮ್ಮ ಪರೀಕ್ಷೆಗಳಲ್ಲಿ ಫೇಲ್ ಅಂತ ಹೇಳುವುದನ್ನು ನಾನು ಕೇಳಿದ್ದೆ. ಇಂಪೀರಿಯಲ್ ಕಾಲೇಜಿನಲ್ಲಿಯೂ ಸಹ ತಮ್ಮ ಪರೀಕ್ಷೆಗಳಲ್ಲಿ ಫೇಲ್ ಆಗಿರುವುದನ್ನು ಮುಕ್ತವಾಗಿ ಹೇಳಿದ್ದರು. ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ರಾಜೀವ್ ಅವರಿಗೆ ಯಾವುದೇ ಕಪಟತನ ಹೊಂದಿರಲಿಲ್ಲ. ಅವರು ಅದನ್ನು ಮರೆಮಾಡಲು ಕೂಡ ಪ್ರಯತ್ನಿಸಲಿಲ್ಲ ಎಂದು ಅಯ್ಯರ್ ಹೇಳಿದರು.
ಇನ್ನು ಸರ್ಕಾರಿ ದಾಖಲೆಗಳ ಪ್ರಕಾರ, ರಾಜೀವ್ ಗಾಂಧಿಯವರು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಆದರೆ, ಫೇಲ್ ಆದ ಕಾರಣ ಲಂಡನ್‌ನ ಇಂಪೀರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಅನ್ನು ಅಧ್ಯಯನ ಮಾಡಿದರು. ಆದರೆ, ಅಲ್ಲಿಯೂ ಫೇಲ್ ಆದರು. ಇಂಗ್ಲೆಂಡ್‌ನಿಂದ ಹಿಂದಿರುಗಿದ ನಂತರ, ಅವರು ದೆಹಲಿ ಫ್ಲೈಯಿಂಗ್ ಕ್ಲಬ್‌ಗೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆದರು. ಶೀಘ್ರದಲ್ಲೇ, ಅವರು ದೇಶೀಯ ರಾಷ್ಟ್ರೀಯ ವಾಹಕವಾದ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಪೈಲಟ್ ಆದರು.
1984ರಲ್ಲಿ ತಮ್ಮ ತಾಯಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾದರು. (ಏಜೆನ್ಸೀಸ್)