ಇಶಾಂತ್ ಶರ್ಮಗೆ ಸಂಕಷ್ಟ ತಂದ 6 ವರ್ಷ ಹಿಂದಿನ ಇನ್‌ಸ್ಟಾಗ್ರಾಂ ಪೋಸ್ಟ್!

ishant2
Published on

ನವದೆಹಲಿ: ಅಮೆರಿಕದಲ್ಲಿ ಜನಾಂಗೀಯ ಕಲಹ ಭುಗಿಲೆದ್ದಿರುವ ನಡುವೆ ವೆಸ್ಟ್ ಇಂಡೀಸ್ ಮಾಜಿ ನಾಯಕ ಡರೇನ್ ಸ್ಯಾಮ್ಮಿ ತಮಗೆ ಐಪಿಎಲ್‌ನಲ್ಲಿ ಜನಾಂಗೀಯ ನಿಂದನೆ ಎದುರಾಗಿತ್ತು ಎಂದು ಆರೋಪಿಸಿದ್ದರು. ಭಾರತ ತಂಡದ ವೇಗಿ ಇಶಾಂತ್ ಶರ್ಮ ಅವರ 6 ವರ್ಷ ಹಿಂದಿನ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಸ್ಯಾಮ್ಮಿ ಮಾತಿಗೆ ಪುಷ್ಟಿ ನೀಡುವಂತಿರುವುದು ಬೆಳಕಿಗೆ ಬಂದಿದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಡುತ್ತಿದ್ದಾಗ ಸಹ-ಆಟಗಾರರು ತಮ್ಮನ್ನು ‘ಕಾಲೂ’ (ಕರಿಯ) ಎಂದು ಕರೆಯುತ್ತಿದ್ದರೆಂದು ಸ್ಯಾಮ್ಮಿ ಇತ್ತೀಚೆಗೆ ಹೇಳಿದ್ದರು. 2014ರ ಮೇ 14ರಂದು ಇಶಾಂತ್ ಶರ್ಮ ಹಾಕಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸ್ಯಾಮ್ಮಿ ಅವರನ್ನು ‘ಕಾಲೂ’ ಎಂದೇ ಹೆಸರಿಸಿದ್ದರು.

2013-14ರ ಅವಧಿಯಲ್ಲಿ ಸ್ಯಾಮ್ಮಿ ಸನ್‌ರೈಸರ್ಸ್‌ ತಂಡವನ್ನು ಪ್ರತಿನಿಧಿಸಿದ್ದಾಗ ಇಶಾಂತ್ ಕೂಡ ಸಹ-ಆಟಗಾರರಾಗಿದ್ದರು. ತಂಡದ ಆಗಿನ ಆಟಗಾರರು ತಮಗೆ ‘ಕಾಲೂ’ ಎಂಬ ಅಡ್ಡಹೆಸರು ಇಟ್ಟಿದ್ದರು ಎಂದು ಸ್ಯಾಮ್ಮಿ ಹೇಳಿಕೊಂಡಿದ್ದರು. ಹಾಗಾದರೆ ಇಶಾಂತ್ ಕೂಡ ಸ್ಯಾಮ್ಮಿ ಅವರನ್ನು ‘ಕಾಲೂ’ ಎಂದೇ ಕರೆಯುತ್ತಿದ್ದರೇ ಎಂಬ ಅನುಮಾನ ಮೂಡಿದ್ದು, ದೆಹಲಿಯ ಲಂಬೂ ವೇಗಿ ಕೂಡ ಜನಾಂಗೀಯ ನಿಂದನೆ ಪ್ರಕರಣದಲ್ಲಿ ಸಿಲುಕಿಕೊಳ್ಳುವಂತಾಗಿದೆ. ಭುವನೇಶ್ವರ್‌ಕುಮಾರ್, ಸ್ಯಾಮ್ಮಿ ಮತ್ತು ಡೇಲ್ ಸ್ಟೈನ್ ಜತೆಗೆ ತಾನಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದ ಇಶಾಂತ್, ‘ನಾನು, ಭುವಿ, ಕಾಲೂ ಮತ್ತು ಗನ್ ಸನ್‌ರೈಸರ್ಸ್‌’ ಎಂಬ ಅಡಿಬರಹ ನೀಡಿದ್ದರು. ಅದರಲ್ಲಿ ಕಾಲೂ ಎಂದರೆ ಸ್ಯಾಮ್ಮಿ ಎಂದಾಗಿತ್ತು.

ಕ್ಷಮೆ ಕೇಳಿ ಎಂದ ಸ್ಯಾಮ್ಮಿ

ಸನ್‌ರೈಸರ್ಸ್‌ ತಂಡದ ಪರ ಆಡುತ್ತಿದ್ದಾಗ ಕೆಲ ಆಟಗಾರರು ತಮ್ಮನ್ನು ‘ಕಾಲೂ’ ಎಂದು ಕರೆಯುತ್ತಿದ್ದರು ಮತ್ತು ಆ ಆಟಗಾರರು ಈಗ ಕ್ಷಮೆಯಾಚಿಸಬೇಕೆಂದು ಡರೇನ್ ಸ್ಯಾಮ್ಮಿ ಒತ್ತಾಯಿಸಿದ್ದಾರೆ. ‘ಯಾರೆಲ್ಲ ನನ್ನನ್ನು ಆ ರೀತಿ ಕರೆಯುತ್ತಿದ್ದಿರೋ, ನಿಮಗೆ ಗೊತ್ತಿದೆಯಲ್ಲವೇ? ಈಗ ನನ್ನೊಂದಿಗೆ ಮಾತನಾಡಿ, ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ನೀವು ಕರೆಯುತ್ತಿದ್ದಾಗ ನನಗೆ ಅದರ ಅರ್ಥ ತಿಳಿದಿರಲಿಲ್ಲ. ಆದರೆ ಈಗ ತಿಳಿದಿದೆ ಮತ್ತು ಸಾಕಷ್ಟು ಸಿಟ್ಟಾಗಿದ್ದೇನೆ. ನಾನು ನಿಮ್ಮನ್ನು ನನ್ನ ಕುಟುಂಬದ ಸದಸ್ಯರಂತೆ ನಂಬಿದ್ದೆ’ ಎಂದು ಸ್ಯಾಮ್ಮಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net