IPL vs PSL : ಜಗತ್ತಿನೆದರು ತೀವ್ರ ಮುಖಭಂಗವಾದರೂ ಮತ್ತೆ ಭಾರತದ ಜತೆ ಸ್ಪರ್ಧೆಗಿಳಿದ ಪಾಕ್​!

IPL vs PSL
Published on

IPL vs PSL : ಭಾರತದ ಆಪರೇಷನ್​ ಸಿಂಧೂರಕ್ಕೆ ತತ್ತರಿಸಿ, ಜಗತ್ತಿನ ಎದುರು ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಇಷ್ಟೆಲ್ಲ ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾತ್ರ ತನ್ನ ವಿಧಾನವನ್ನು ಬದಲಾಯಿಸಿಲ್ಲ. ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಆವೃತ್ತಿಯೊಂದಿಗೆ ಸ್ಪರ್ಧಿಸಲು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್-2025) ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದು ಎಲ್ಲರಿಗೂ ಗೊತ್ತಿದೆ. ಮಾರ್ಚ್ 22 ರಂದು ಪ್ರಾರಂಭವಾದ ಐಪಿಎಲ್​ಗೆ ಸ್ಫರ್ಧೆ ಒಡ್ಡಲು ಏಪ್ರಿಲ್ 11 ರಂದು ಪಿಎಸ್​ಎಲ್​ ಟಿ20 ಲೀಗ್ ಆರಂಭವಾಯಿತು. ಆದರೆ, ಐಪಿಎಲ್​ ಕ್ರೇಜ್​ ಮುಂದೆ ಪಿಎಸ್​ಎಲ್​ ಮಂಕಾಯಿತು.​ ಇದೀಗ ಪಿಸಿಬಿ ಮತ್ತೆ ಅದೇ ಕೆಲಸವನ್ನು ಮಾಡಲು ಸಿದ್ಧವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಕೆಲ ಕಾಲ ಮುಂದೂಡಲ್ಪಟ್ಟಿರುವ ಎರಡೂ ಲೀಗ್‌ಗಳು ಇದೀಗ ಮತ್ತೆ ಆರಂಭವಾಗಲು ಸಜ್ಜಾಗಿವೆ. ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರ, ಈ ಎರಡು ಲೀಗ್‌ಗಳು ಮತ್ತೆ ಪ್ರಾರಂಭವಾಗಲಿವೆ. ಆದಾಗ್ಯೂ, ಪುನರಾರಂಭದಲ್ಲಿಯೂ ಸಹ, ಪಿಸಿಬಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ (ಬಿಸಿಸಿಐ) ಸ್ಪರ್ಧೆಗೆ ಇಳಿದಿದೆ.

ಈ ಋತುವಿನ ಉಳಿದ ಐಪಿಎಲ್ ಪಂದ್ಯಗಳು ಮೇ 17ರಿಂದ ಪ್ರಾರಂಭವಾಗಲಿವೆ ಎಂದು ಬಿಸಿಸಿಐ ಘೋಷಿಸಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಪಿಎಸ್‌ಎಲ್ ಮೇ 17 ರಿಂದ ಮತ್ತೆ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಐಪಿಎಲ್​ ಪುನಾರಂಭ ಘೋಷಣೆ ಬೆನ್ನಲ್ಲೇ ವಿದೇಶಿ ಆಟಗಾರ ಮತ್ತೆ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಆದರೆ, ಪಾಕಿಸ್ತಾನ ವಿಚಾರದಲ್ಲಿ ಇದು ಭಿನ್ನವಾಗಿದೆ. ಭಾರತೀಯ ಸೇನೆಯ ದಾಳಿಯಿಂದ ಭಯಭೀತರಾಗಿರುವ ಅನೇಕ ವಿದೇಶಿ ಆಟಗಾರರು ಇನ್ನು ಮುಂದೆ ಪಾಕಿಸ್ತಾನಕ್ಕೆ ಕಾಲಿಡುವುದೇ ಇಲ್ಲ ಎನ್ನುತ್ತಿದ್ದಾರೆ.

ಕೇನ್ ವಿಲಿಯಮ್ಸನ್ ಸೇರಿದಂತೆ ಇತರ ನ್ಯೂಜಿಲೆಂಡ್ ಆಟಗಾರರು ಪಾಕಿಸ್ತಾನಕ್ಕೆ ವಿದಾಯ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಅದರಲ್ಲೂ ಕಿವೀಸ್​ನ ಡರೈಲ್​ ಮಿಚೆಲ್ ಮತ್ತೆಂದೂ ಪಾಕಿಸ್ತಾನಕ್ಕೆ ಕಾಲಿಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಕೆಲವು ವಿದೇಶಿ ಆಟಗಾರರು ಪಿಎಸ್‌ಎಲ್‌ಗೆ ಮರಳುವ ಸಾಧ್ಯತೆಯಿದೆ. ಪಿಎಸ್‌ಎಲ್ ಸೀಸನ್ ಮೇ. 25 ರಂದು ನಡೆಯುವ ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಆದಾಗ್ಯೂ, ಅನೇಕ ಸ್ಟಾರ್ ಕ್ರಿಕೆಟಿಗರು ಹಿಂತಿರುಗದಿರಲು ನಿರ್ಧರಿಸಿರುವುದರಿಂದ, ಪಿಸಿಬಿ ಆಯಾ ಫ್ರಾಂಚೈಸಿಗಳಿಗೆ ತಕ್ಷಣ ಅವರನ್ನು ಬದಲಾಯಿಸಲು ಮತ್ತು ಪುನರಾರಂಭಕ್ಕೆ ಸಿದ್ಧರಾಗಿರಲು ಸೂಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net