ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯ, ಫೈನಲ್ ದಿನಾಂಕ ನಿಗದಿ

ipl web
Published on

ನವದೆಹಲಿ: ಮುಂಬರುವ ಐಪಿಎಲ್ 14ನೇ ಆವೃತ್ತಿ ಏಪ್ರಿಲ್ 9ರಿಂದ ಮೇ 30ರವರೆಗೆ ದೇಶದ 6 ನಗರಗಳಲ್ಲಿ ನಡೆಯಲಿದೆ. ಅಂದರೆ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಮುಕ್ತಾಯಗೊಂಡ ಭರ್ತಿ 12 ದಿನಗಳ ಬಳಿಕ ಐಪಿಎಲ್ ಟೂರ್ನಿ ಶುರುವಾಗಲಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯ ಮಾರ್ಚ್ 28ರಂದು ಪುಣೆಯಲ್ಲಿ ನಡೆಯಲಿದೆ. ಕರೊನಾ ವೈರಸ್ ಹಾವಳಿಯಿಂದಾಗಿ ಕಳೆದ ವರ್ಷ ಯುಎಇಯಲ್ಲಿ ಆಯೋಜನೆಗೊಂಡಿದ್ದ ಟೂರ್ನಿ ಈ ಬಾರಿ ತವರಿಗೆ ಮರಳುತ್ತಿದೆ. ದೇಶದಲ್ಲಿ ಸದ್ಯ ಕರೊನಾ ಪ್ರಕರಣಗಳು ಸಾಕಷ್ಟು ನಿಯಂತ್ರಣದಲ್ಲಿದ್ದು, ಈಗಾಗಲೆ ಕರೊನಾ ಲಸಿಕೆ ನೀಡುವ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಬೆಂಗಳೂರು, ದೆಹಲಿ, ಚೆನ್ನೈ, ಅಹಮದಾಬಾದ್, ಕೋಲ್ಕತ, ಮುಂಬೈ ನಗರಗಳಲ್ಲಿ 52 ದಿನಗಳ ಅಂತರದಲ್ಲಿ 60 ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ. ಆದರೆ ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಚೆನ್ನೈ ಮತ್ತು ಕೋಲ್ಕತದಲ್ಲಿ ಅಲ್ಲಿನ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳನ್ನು ನಿಗದಿಗೊಳಿಸಬೇಕಾಗಿದೆ.

ಈಗಾಗಲೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಬಯೋ-ಬಬಲ್ ವಾತಾವರಣದಲ್ಲಿ ಯಶಸ್ವಿಯಾಗಿ ಆಯೋಜಿಸುತ್ತಿರುವುದರಿಂದ ಐಪಿಎಲ್‌ಗೆ ಬಿಸಿಸಿಐ ಹೆಚ್ಚಿನ ವಿಶ್ವಾಸದಲ್ಲಿ ಸಜ್ಜಾಗುತ್ತಿದೆ. ಆದರೆ ಆರೂ ನಗರಗಳಲ್ಲಿ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ಶೇ. 50 ಪ್ರೇಕ್ಷಕರಿಗೆ ಪ್ರವೇಶ ಸಿಗುವುದು ಖಚಿತವೆನಿಸಿದೆ.

ಈ ಮುನ್ನ ಮಹಾರಾಷ್ಟ್ರದ ಕರೊನಾ ಪ್ರಕರಣಗಳ ಏರಿಕೆಯಿಂದಾಗಿ ಮುಂಬೈ ನಗರವನ್ನು ಐಪಿಎಲ್‌ನಿಂದ ಹೊರಗಿಡುವ ಚಿಂತನೆ ನಡೆದಿತ್ತು. ಆದರೆ, ಐಪಿಎಲ್ ಪಂದ್ಯಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಭರವಸೆಯ ಬಳಿಕ ಮುಂಬೈ ಕೂಡ ಸದ್ಯ ಪಟ್ಟಿಯಲ್ಲಿ ಉಳಿದುಕೊಂಡಿದೆ. ಈ ನಡುವೆ ಹೈದರಾಬಾದ್, ಜೈಪುರ ಮತ್ತು ಮೊಹಾಲಿ ನಗರಗಳಲ್ಲೂ ಪಂದ್ಯ ಆಯೋಜಿಸಬೇಕೆಂದು ಸನ್‌ರೈಸರ್ಸ್‌, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳಿಗೆ ಬಿಸಿಸಿಐಗೆ ಒತ್ತಡ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net