

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( BCCI ) ಮುಂಬರುವ ಐಪಿಎಲ್ ( IPL ) ಮೆಗಾ ಹರಾಜಿಗಾಗಿ ಹೊಸ ರಿಟೇನ್ ನಿಯಾಮವಳಿಯನ್ನು ಬಿಡುಗಡೆ ಮಾಡಿದೆ. ಪ್ರತಿ ತಂಡ ಆರು ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದ್ದು, ಅಕ್ಟೋಬರ್ 31 ರೊಳಗೆ ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಎಲ್ಲ ಫ್ರಾಂಚೈಸಿಗಳನ್ನು ಬಿಸಿಸಿಐ ಕೇಳಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. ಆ ಸಲಹೆ ಏನು ಎಂಬುದನ್ನು ನಾವೀಗ ತಿಳಿಯೋಣ.
ಆರ್ಸಿಬಿಯ ಆಪತ್ಬಾಂಧವ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತು ಮಾಡುತ್ತಲೇ ಇದಾರೆ. ಕಳೆದ ವರ್ಷ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು. ಅದೂ ಅಲ್ಲದೆ, ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪ್ ಕೂಡ ಪಡೆದುಕೊಂಡರು. 15 ಪಂದ್ಯಗಳಲ್ಲಿ 741 ರನ್ ಗಳಿಸಿದರು. ಐಪಿಎಲ್ ಆರಂಭವಾದಾಗಿನಿಂದ ಕೊಹ್ಲಿ ಆರ್‌ಸಿಬಿ ಬಿಟ್ಟು ಬೇರೆ ಯಾವುದೇ ತಂಡಕ್ಕೂ ಹೋಗಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ.
ಐಪಿಎಲ್ ಹೊಸ ರಿಟೇನ್ ಪಾಲಿಸಿ ಬಿಡುಗಡೆ ಬೆನ್ನಲ್ಲೇ ಕಲರ್ಸ್ ಸಿನಿಪ್ಲೆಕ್ಸ್ ಜೊತೆ ಮಾತನಾಡಿದ ಆರ್ ಪಿ ಸಿಂಗ್, ಕೊಹ್ಲಿ ಅವರು ಆರ್‌ಸಿಬಿ ತಂಡದೊಂದಿಗೆ ಇರಲೇಬೇಕು ಎಂದಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ರಜತ್ ಪಾಟಿದಾರ್ ಅವರಂತಹ ಇತರ ಆಟಗಾರರನ್ನು ಆರ್‌ಟಿಎಂ ಕಾರ್ಡ್ ಬಳಸಿ ಹರಾಜಿನಲ್ಲಿ ಮರಳಿ ತರಬಹುದು. ಈ ಇಬ್ಬರು ಆಟಗಾರರು 11 ಕೋಟಿ ರೂ.ಗಿಂತ ಹೆಚ್ಚು ಬೆಲೆ ಬಾಳುವುದಿಲ್ಲ ಎಂದು ಮಾಜಿ ವೇಗದ ಬೌಲರ್ ಆರ್.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರು ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳಬೇಕು. ಉಳಿದ ಎಲ್ಲರನ್ನೂ ಬಿಡುಗಡೆ ಮಾಡಬೇಕು. ರಜತ್ ಪಾಟಿದಾರ್ ಅವರ ಮೌಲ್ಯವನ್ನು ನಾವು ಉದಾಹರಣೆಯಾಗಿ ತೆಗೆದುಕೊಂಡರೆ, ಹರಾಜಿನಲ್ಲಿ ನಾವು ಅವರನ್ನು 11 ಕೋಟಿಗಿಂತ ಹೆಚ್ಚು ಅಥವಾ ಕಡಿಮೆಗೆ ಪಡೆಯುತ್ತೇವೆಯೇ? ನೀವು ರಜತ್ ಪಾಟಿದಾರ್ ಅವರನ್ನು ಕಡಿಮೆ ಬೆಲೆಗೆ ಪಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನೀವು ಅವರನ್ನು ಹರಾಜಿನಲ್ಲಿ ಮರಳಿ ಪಡೆಯುತ್ತೀರಿ. ಅವರು 11 ಕೋಟಿಗೆ ತಲುಪಿದರೂ ಸಹ, ನೀವು ಅಲ್ಲಿ RTM ಬಳಸಬಹುದು ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.
ಹರಾಜಿನಲ್ಲಿ ಮೊಹಮ್ಮದ್ ಸಿರಾಜ್ ಸುಮಾರು 11 ಕೋಟಿ ರೂಪಾಯಿ ಪಡೆಯುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಸಿರಾಜ್ ಅವರು 14 ಕೋಟಿ ತಲುಪುವುದು ತುಂಬಾನೇ ಕಷ್ಟ. ಹಾಗಾಗಿ ಆರ್‌ಟಿಎಂ ಬಳಸಲು ಆರ್‌ಸಿಬಿಗೆ ಅವಕಾಶವಿದೆ ಎಂದು ಆರ್‌ಪಿ ಸಿಂಗ್ ತಿಳಿಸಿದರು.
ಸದ್ಯ ಆರ್‌ಸಿಬಿ ಹೊಸ ಮನಸ್ಥಿತಿಯೊಂದಿಗೆ ಮುನ್ನಡೆಯಬೇಕಿದೆ. ಆರ್‌ಸಿಬಿಗೆ ವಿರಾಟ್ ಕೊಹ್ಲಿ ಬೇಕು. ಏಕೆಂದರೆ, ಅವರು ತಂಡಕ್ಕಾಗಿ ತುಂಬಾ ಮಾಡಿದ್ದಾರೆ. ವಿರಾಟ್ ಅತ್ಯಂತ ಪ್ರಮುಖ ಆಟಗಾರ. ಕೊಹ್ಲಿ ಸುತ್ತ ತಂಡವನ್ನು ಕಟ್ಟುವ ಬಗ್ಗೆ ಆರ್‌ಸಿಬಿ ಯೋಚಿಸಬೇಕು ಎಂದು ಆರ್‌ಪಿ ಸಿಂಗ್ ಸಲಹೆ ನೀಡಿದರು. (ಏಜೆನ್ಸೀಸ್)