

ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ನೀಡಲು ಬೆಂಗಳೂರಿನಲ್ಲಿ ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಜುಲೈನಲ್ಲಿ ನಡೆದ ಸಭೆಯಲ್ಲಿ ಐಪಿಎಲ್ ತಂಡಗಳ ಮಾಲೀಕರು ನೀಡಿದ ಸಲಹೆಗಳ ಆಧಾರದಲ್ಲಿ 5 ಆಟಗಾರರ ರಿಟೇನ್ ಜತೆಗೆ ಹರಾಜಿನಲ್ಲಿ ಒಂದು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಕೆಗೂ ಅವಕಾಶ ನೀಡಲಾಗುತ್ತದೆ. ಐವರು ಆಟಗಾರರ ರಿಟೇನ್ ವೇಳೆ ಇಂತಿಷ್ಟೇ ಭಾರತೀಯ ಅಥವಾ ವಿದೇಶಿ ಆಟಗಾರರು ಇರಬೇಕೆಂಬ ನಿರ್ಬಂಧವನ್ನೂ ಹೇರಲಾಗಿಲ್ಲ.
ಪ್ರತಿ ತಂಡಗಳ ಬಜೆಟ್ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್ ಮಾಡಿದರೆ, ಹರಾಜಿನಲ್ಲಿ 3 ಆರ್ಟಿಎಂ ಬಳಸಬಹುದಾಗಿದೆ. 4 ಆಟಗಾರರ ರಿಟೇನ್ ಮಾಡಿದರೆ 2 ಆರ್ಟಿಎಂ ಬಳಸಬಹುದು. ಆರ್ಟಿಎಂ ಪ್ರಕಾರ ಹರಾಜಿನಲ್ಲಿ ಆಟಗಾರನೊಬ್ಬನಿಗೆ ತಂಡವೊಂದು ಗರಿಷ್ಠ ಮೊತ್ತದ ಬಿಡ್ ಸಲ್ಲಿಸಿದಾಗ ಆತನ ಮೂಲ ತಂಡ ಆರ್ಟಿಎಂ ಮೂಲಕ ಅದೇ ಮೊತ್ತಕ್ಕೆ ತನ್ನಲ್ಲಿಯೇ ಉಳಿಸಿಕೊಳ್ಳಬಹುದಾಗಿದೆ.
5+1 ಆಟಗಾರರ ರಿಟೇನ್ಗೆ ಬಿಸಿಸಿಐ ಅವಕಾಶ ಕಲ್ಪಿಸಿರುವುದರಿಂದ, ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಆಟಗಾರರ ರಿಟೇನ್ ಅವಕಾಶವಾಗಿದೆ. 2018ರ ಮೆಗಾ ಹರಾಜಿಗೆ ಮುನ್ನ 5 ಆಟಗಾರರ ರಿಟೇನ್ಗೆ ಅವಕಾಶ ನೀಡಿದ್ದು ಇದುವರೆಗಿನ ಗರಿಷ್ಠವಾಗಿತ್ತು. ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್ 2ನೇ ವಾರ ನಡೆಯುವ ನಿರೀಕ್ಷೆ ಇದೆ.
ಬಾಂಬ್ ಬೆದರಿಕೆಯಿಂದ ಐಪಿಎಲ್ ಸಭೆ ವಿಳಂಬ!
ಐಪಿಎಲ್ ಆಡಳಿತ ಮಂಡಳಿಯ ಸಭೆ ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್ನಲ್ಲಿ ಶನಿವಾರ ಬೆಳಗ್ಗೆ 11.30ರಿಂದ ನಿಗದಿಯಾಗಿತ್ತು. ಆದರೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಭೆಯನ್ನು ಸಂಜೆ 6.30ಕ್ಕೆ ಮುಂದೂಡಲಾಯಿತು. ಎರಡು ಹೋಟೆಲ್ಗಳು ಸುಮಾರು 5 ಕಿಲೋಮೀಟರ್ ಅಂತರದಲ್ಲಿವೆ. ಇದೊಂದು ಹುಸಿ ಬಾಂಬ್ ಕರೆ ಆಗಿದ್ದರೂ, ಮುನ್ನೆಚ್ಚರಿಕೆಯ ಕ್ರಮವಾಗಿ ಐಪಿಎಲ್ ಆಡಳಿತ ಮಂಡಳಿ ಸಭೆಯನ್ನು ಮುಂದೂಡಲಾಗಿತ್ತು.