

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಹೈವೋಲ್ಟೇಜ್ ನಾಕೌಟ್ ಪಂದ್ಯ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಎರಡು ತಂಡಗಳ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ಹೇಳಲಾಗಿದ್ದು, ಅಭಿಮಾನಿಗಳು ಪಂದ್ಯ ಮುಗಿಯುವವರೆಗೂ ಮಳೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಸಿಎಸ್ಕೆ ಪ್ಲೇಆಫ್ ಪ್ರವೇಶಿಸುತ್ತದೆ. ಆದರೆ, ಮಳೆಯಿಂದಾಗಿ ಓವರ್ಗಳು ಕಡಿತಗೊಂಡಲ್ಲಿ ಎದುರಾಳಿ ತಂಡದ ವಿರುದ್ಧ ಎಷ್ಟು ರನ್ಗಳ ಅಥವಾ ಓವರ್ಗಳ ಅಂತರದಲ್ಲಿ ಆರ್ಸಬಿ ಗೆಲ್ಲಬೇಕಿದೆ ಎಂಬುದರ ಲೆಕ್ಕಾಚಾರ ಹೊರಬಿದ್ದಿದೆ.
ಒಂದು ವೇಳೆ ಮಳೆ ಬಾರದೆ ಆರ್ಸಿಬಿ ಮೊದಲು ಬ್ಯಾಟ್ ಮಾಡಿದ್ದಲ್ಲಿ ಎದುರಾಳಿ ತಂಡದ ವಿರುದ್ಧ 18 ರನ್ಗಳ ಜಯ ಸಾಧಿಸಬೇಕಿದೆ. ಒಂದು ವೇಳೆ ಟಾರ್ಗೆಟ್ ಚೇಸ್ ಮಾಡಿದ್ದಲ್ಲಿ 200ಕ್ಕೂ ಅಧಿಕ ಮೊತ್ತವನ್ನು 18.1 ಓವರ್ಗಳಲ್ಲಿ ಗುರಿಯನ್ನು ಬೆನ್ನತ್ತಿ ಪ್ಲೇಆಫ್ ಪ್ರವೇಶಿಸಬಹುದಾಗಿದೆ. ಒಂದು ವೇಳೆ ಮಳೆಯಿಂದ ಏನಾದರೂ ಓವರ್ಗಳು ಕಡಿತಗೊಂಡು ಆರ್ಸಿಬಿ ಮೊದಲು ಬ್ಯಾಟ್ ಮಾಡಿದ್ದಲ್ಲಿ ಎದುರಾಳಿ ತಂಡದ ವಿರುದ್ಧ 18 ಹಾಗೂ ಅದಕ್ಕಿಂತ ಹೆಚ್ಚಿನ ರನ್ಗಳ ಜಯ ಸಾಧಿಸಬೇಕಿದ. ಒಂದು ವೇಳೆ ಟಾರ್ಗೆಟ್ ಚೇಸ್ ಮಾಡಿದ್ದಲ್ಲಿ ಕನಿಷ್ಠ ಎಂದರೂ 18ಕ್ಕಿಂತ ಹೆಚ್ಚಿನ ಎಸೆತಗಳನ್ನು ಬಾಕಿ ಇರುವಂತೆಯೇ ಗೆಲ್ಲಬೇಕಿದೆ.
ಒಂದು ವೇಳೆ ಆರ್ಸಿಬಿ ಚೆನ್ನೈ ವಿರುದ್ಧ ಗೆದ್ದಲ್ಲಿ ಪ್ಲೇಆಫ್ ಪ್ರವೇಶಿಸಿದ ನಾಲ್ಕನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಂದು ವೇಳೆ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿದಲ್ಲಿ ಆರ್ಸಿಬಿಗೆ ಎರಡನೇ ಸ್ಥಾನಕ್ಕೇರುವ ಅವಖಾಶವನ್ನು ಹೊಂದಿದ್ದು, ಮೇ 19ರಂದು ನಡೆಯಲಿರುವ ಡಬಲ್ ಹೆಡರ್ ಪಂದ್ಯದಲ್ಲಿ ಪಂಜಾಬ್ ಎದುರು ಸನ್ರೈಸರ್ಸ್ ಹಾಗೂ ಕೋಲ್ಕತ ಎದುರು ರಾಜಸ್ಥಾನ ರಾಯಲ್ಸ್ ಹೀನಾಯವಾಗಿ ಸೋಲಬೇಕಿದೆ. ಒಂದು ವೇಳೆ ಇದು ಆದಲ್ಲಿ ಆರ್ಸಿಬಿಗೆ ಪ್ಲೇಆಫ್ನಲ್ಲಿ ಎರಡು ಅವಕಾಶಗಳು ದೊರೆಯಲಿವೆ.