ಐಪಿಎಲ್​ ಹರಾಜಿಗೆ ವೇದಿಕೆ ಸಿದ್ಧ; ಆಟಗಾರರ ಖರೀದಿಗೆ ಆಯಾ ತಂಡಗಳ ಬಳಿ ಉಳಿದಿರುವ ಹಣವೆಷ್ಟು? ಇಲ್ಲಿದೆ ವಿವರ | IPL

ವಿಜಯವಾಣಿ - 2024-11-15T203809.288
Published on

ನವದೆಹಲಿ: ಈಗಾಗಲೇ ಐಪಿಎಲ್​ ರಿಟೆನ್ಶನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳಿಂದ ಸ್ಟಾರ್​ ಆಟಗಾರರೇ ಹೊರಬಿದ್ದಿದ್ದಾರೆ. ಇದೇ ನವೆಂಬರ್​ 24-25ರಂದು ನಡೆಯಲಿರುವ ಐಪಿಎಲ್​ ಹರಾಜಿನತ್ತ ಎಲ್ಲಾ ಫ್ರಾಂಚೈಸಿಗಳ ಚಿತ್ತ ಮೂಡಿದ್ದು, ಯಾವ ಸ್ಟಾರ್​ ಆಟಗಾರರನ್ನು ತಮ್ಮ ಫ್ರಾಂಚೈಸಿಗೆ ಎಳೆದುಕೊಳ್ಳುವುದು ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಕಣ್ಣಿಟ್ಟ ಆಟಗಾರರನ್ನು ಖರೀದಿ ( IPL Auction) ಮಾಡೋದು ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದಕ್ಕೆ ಕಾರಣ, ನಿಗದಿತ ಬಜೆಟ್​ನಡಿ ಕ್ರಿಕೆಟಿಗರನ್ನು ಆಯ್ಕೆ ಮಾಡಿಕೊಳ್ಳುವುದು. ಈ ಮಧ್ಯೆ ಅವರು ಟೀಮ್​ಗೆ ಲಾಭದಾಯಕವೇ, ಅತ್ಯುತ್ತಮ ಆಟಗಾರರೇ, ಉತ್ತಮ ಕೊಡುಗೆ ಕೊಡಬಲ್ಲರೇ? ಈ ಎಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು, ನಿರ್ದಿಷ್ಟ ಬಜೆಟ್​ನಲ್ಲಿ ಖರೀದಿ ಮಾಡಬೇಕು. ಈ ಕುರಿತು ಸದ್ಯ 10 ತಂಡಗಳಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ಟಾರ್​ ಆಟಗಾರರ ಪೈಕಿ ರಿಷಬ್ ಪಂತ್, ಶ್ರೇಯಸ್​ ಅಯ್ಯರ್, ಫಾಫ್ ಡು ಪ್ಲೆಸಿಸ್​, ಗ್ಲೆನ್ ಮ್ಯಾಕ್ಸ್​ವೆಲ್​, ಮಿಚೆಲ್ ಸ್ಟಾರ್ಕ್​, ಕೆ.ಎಲ್​. ರಾಹುಲ್​, ಶಿಖರ್ ಧವನ್​ ಸೇರಿದಂತೆ ಕೆಲವರು ಹರಾಜಿನಲ್ಲಿ ಫ್ರಾಂಚೈಸಿಗಳ ಮುಂದಿರುವ ಮೊದಲ ಆಯ್ಕೆ ಎಂದು ಹೇಳಲಾಗಿದೆ.

ಅಖಾಡದಲ್ಲಿ 574 ಆಟಗಾರರು

ಎರಡು ದಿನ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 574 ಆಟಗಾರರು ಭಾಗವಹಿಸಲಿದ್ದಾರೆ. ಈ ಪೈಕಿ 366 ಭಾರತೀಯ ಆಟಗಾರರಿದ್ದರೆ, 208 ವಿದೇಶಿ ಪ್ಲೇಯರ್ಸ್​ಗಳಿದ್ದಾರೆ. ಆಕ್ಷನ್​ನಲ್ಲಿ 318 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಸೇರಿದ್ದಾರೆ. ಹಲವು ಸ್ಟಾರ್​ ಪ್ಲೇಯರ್ಸ್​ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿಗಳು, ತಮ್ಮ ತಂಡಕ್ಕೆ ಲಾಭ ತಂದುಕೊಡಬಹುದಾದ ಆಲ್​ರೌಂಡ್ ಆಟಗಾರನ ಜತೆ ಅತ್ಯುತ್ತಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿ ನಡೆಸುವ ಕ್ರಿಕೆಟಿಗರನ್ನು ಖರೀದಿ ಮಾಡಲು ಎದುರುನೋಡುತ್ತಿವೆ. ಆದರೆ, ಇದಕ್ಕೆ ಸದ್ಯ ತಮ್ಮ ಬಳಿಯಿರುವ ಹಣ ಸಾಕೇ? ಎಂಬ ಚಿಂತೆಯಲ್ಲಿದೆ. ಅಸಲಿಗೆ ಆಯಾ ತಂಡಗಳ ಹತ್ತಿರ ಪ್ರಸ್ತುತ ಇರುವ ಹಣವೆಷ್ಟು ಎಂಬುದರ ವಿವರ ಹೀಗಿದೆ ನೋಡಿ.

120 ಕೋಟಿ ರೂ.ನಲ್ಲಿ ಉಳಿದ ಹಣದ ವಿವರ:

  • ಮುಂಬೈ ಇಂಡಿಯನ್ಸ್​: 55 ಕೋಟಿ
  • ಸನ್​ರೈಸರ್ಸ್​ ಹೈದರಾಬಾದ್​: 45 ಕೋಟಿ
  • ಲಖನೌ ಸೂಪರ್ ಜೈಂಟ್ಸ್​: 69 ಕೋಟಿ
  • ಪಂಜಾಬ್ ಕಿಂಗ್ಸ್​: 110.5 ಕೋಟಿ
  • ರಾಜಸ್ಥಾನ ರಾಯಲ್ಸ್​: 41 ಕೋಟಿ
  • ಚೆನ್ನೈ ಸೂಪರ್ ಕಿಂಗ್ಸ್​: 65 ಕೋಟಿ
  • ರಾಯಲ್ ಚಾಲೆಂಜರ್ಸ್​ ಬೆಂಗಳೂರು: 83 ಕೋಟಿ
  • ಕೋಲ್ಕತ ನೈಟ್ ರೈಡರ್ಸ್​: 51 ಕೋಟಿ
  • ಡೆಲ್ಲಿ ಕ್ಯಾಪಿಟಲ್ಸ್​: 73 ಕೋಟಿ
  • ಗುಜರಾತ್ ಟೈಟನ್ಸ್​: 69 ಕೋಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net