

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಕಾರು ಬೆಂಕಿಗಾಹುತಿಯಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಶುಕ್ರವಾರ ಕದ್ರಿ ಪೊಲೀಸ್ ಠಾಣೆ ಎದುರು ಸ್ವಿಫ್ಟ್ ಕಾರೊಂದು ಬೆಂಕಿಗಾಹುತಿಯಾಗಿದೆ. ಎರಡು ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಪ್ರಕರಣ.
ನಗರದ ಸೆಕೆಂಡ್ ಸೇಲ್ ಮಳಿಗೆಯಿಂದ ತಲಪಾಡಿಯ ಅಂಕಿತ್ ಎಂಬವರು ಶುಕ್ರವಾರ ಸಂಜೆ ಕಾರು ಖರೀದಿಸಿ ಕೊಂಡೊಯ್ಯುತ್ತಿದ್ದರು. ಈ ವೇಳೆ ಕಾರನ್ನು ಕದ್ರಿ ಪೊಲೀಸ್ ಠಾಣೆಯ ಮುಂಭಾಗ ನಿಲ್ಲಿಸಿ, ಕೆಲ ಹೊತ್ತಿನ ಬಳಿಕ ಮತ್ತೆ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ಈ ಸಂದರ್ಭ ಕಾರಿನ ಬೋನೆಟ್ನಲ್ಲಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ನಂತಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಒಮ್ಮೆಲೇ ಆತಂಕಿತರಾದ ಅಂಕಿತ್ ಅವರು ಕಾರನ್ನು ನಿಲ್ಲಿಸಿ, ಕೆಳಗೆ ಇಳಿದಿದ್ದಾರೆ. ಇದಾದ ಅರೆಕ್ಷಣದಲ್ಲೇ ಇಡೀ ಕಾರಿಗೆ ಬೆಂಕಿ ವ್ಯಾಪಿಸಿದೆ. ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ.
ಸೆ.5ರಂದು ಸುರತ್ಕಲ್ ಟೋಲ್ಗೇಟ್ ಬಳಿ ಬಿಎಂಡಬ್ಲೂೃ ಕಾರು, ಸೆ.28ರಂದು ಅಡ್ಯಾರ್ನಲ್ಲಿ ಬಿಎಂಡಬ್ಲೂೃ ಕಾರು, ನ.10ರಂದು ನಗರದ ಲೇಡಿಹಿಲ್ ಬಳಿಯಿರುವ ಪೆಟ್ರೋಲ್ ಬಂಕ್ಗೆ ಇಂಧನ ತುಂಬಿಸಲು ಬಂದಿದ್ದ ಬಜಪೆ ನಿವಾಸಿ ಪಾರ್ಶ್ವನಾಥ್ ಎಂಬವರ ಮಾರುತಿ 800 ಕಾರು ಏಕಾಏಕಿ ಬೆಂಕಿಗಾಹುತಿಯಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಅದೃಷ್ಟವಶಾತ್ ಪ್ರಯಾಣಿಕರಿಗೆ ಗಾಯವಾಗಿಲ್ಲ.