

ಮುಂಬೈ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ಗೆ (IPL 2025) ಸಂಬಂಧಿಸಿದಂತೆ ಈಗಾಗಲೇ ಒಂದಿಲ್ಲೊಂದು ಸುದ್ದಿಗಳು ಕ್ರೀಡಾವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ರಿಟೇನ್ಗೆ ಸಂಬಂಧಿಸಿದಂತೆ ಗರಿಗೆದರಿದ್ದ ಕುಯತೂಹಲಕ್ಕೆ ತೆರೆ ಬಿದ್ದಿದೆ. ಐಪಿಎಲ್ನ ಎಲ್ಲಾ 10 ಫ್ರಾಂಚೈಸಿಗಳು ರಿಟೇನ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಿಷಭ್ ಪಂತ್, ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಮೆಗಾ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಫ್ರಾಂಚೈಸಿಯ ನಿರ್ಧಾರಗಳು ಅಚ್ಚರಿ ಮೂಡಿಸಿದ್ದರೂ, ಕೆಲವು ನಿರೀಕ್ಷೆಗಳು ನಿಜವಾಗಿದೆ. ಎಂಎಸ್ ಧೋನಿ ಅನ್ಕ್ಯಾಪ್ಡ್ ಆಟಗಾರನಾಗಿ ಸಿಎಸ್ಕೆ ತಂಡದಲ್ಲಿ ಉಳಿಯಲಿದ್ದು 4 ಕೋಟಿ ರೂಪಾಯಿ ಪಡೆಯಲಿದ್ದಾರೆ.
ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮಾತ್ರ ಆರು ಆಟಗಾರರನ್ನು ಉಳಿಸಿಕೊಂಡಿವೆ. ಪಂಜಾಬ್ ಕಿಂಗ್ಸ್ ತಂಡ ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದ್ದು ಬರೋಬ್ಬರಿ 110.5 ಕೋಟಿ ರೂಪಾಯಿಯನ್ನು ಪರ್ಸ್ನಲ್ಲಿ ಉಳಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಮೆಗಾ ಹರಾಜಿಗಾಗಿ 41 ಕೋಟಿ ರೂಪಾಯಿ ಮೊತ್ತವನ್ನು ಪರ್ಸ್ನಲ್ಲಿ ಉಳಿಸಿಕೊಂಡಿದ್ದು, ಕಡಿಮೆ ಮೊತ್ತದೊಂದಿಗೆ ಐಪಿಎಲ್ನ (IPL 2025) ಮೆಗಾ ಹರಾಜಿಗೆ ಬರಲಿದೆ.