

RCB : ಇಂಡಿಯನ್ ಪ್ರೀಮಿಯರ್ ಲೀಗ್-2025 ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ಗೆ ಲಗ್ಗೆ ಇಟ್ಟಿರುವುದು ಎಲ್ಲರಿಗೂ ತಿಳಿದಿದೆ. ಬರೋಬ್ಬರಿ 9 ವರ್ಷಗಳ ಬಳಿಕ ಆರ್ಸಿಬಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಕೊನೆಯದಾಗಿ 2016ರಲ್ಲಿ ಫೈನಲ್ ಪ್ರವೇಶಿಸಿ ಎಸ್ಆರ್ಎಚ್ ವಿರುದ್ಧ ಸೋಲುಂಡಿದ್ದ ಆರ್ಸಿಬಿ ಈ ಬಾರಿ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದೆ. ಹೀಗಿರುವಾಗ ಈ ಎರಡು ಭಾವನೆ (ಸೆಂಟಿಮೆಂಟ್) ನಿಜವಾದರೆ, ಈ ಬಾರಿ ಆರ್ಸಿಬಿ ಟ್ರೋಫಿ ಎತ್ತಿಹಿಡಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡ ಕಳೆದ ಏಳು ಫೈನಲ್ಗಳಲ್ಲಿ ಗೆಲುವು ಕಂಡು ಟ್ರೋಫಿ ಎತ್ತಿಹಿಡಿದಿದ್ದಾರೆ. ಇದು 2018 ರಿಂದ 2024 ರವರೆಗಿನ ಎಲ್ಲಾ ಐಪಿಎಲ್ ಸೀಸನ್ಗಳಲ್ಲಿ ಇದು ಸಂಭವಿಸಿದೆ. ಇದೇ ಭಾವನೆ ಅಂತಾ ಸೆಂಟಿಮೆಂಟ್ ವರ್ಕೌಟ್ ಆಗಿದ್ದರೆ, ಈ ಬಾರಿ ಆರ್ಸಿಬಿ ಐಪಿಎಲ್ ಪ್ರಶಸ್ತಿ ವಿಜೇತರಾಗಿ ಹೊರಹೊಮ್ಮಲಿದೆ.
ಕಳೆದ ಏಳು ಸೀಸನ್ಗಳಲ್ಲಿ ಕ್ವಾಲಿಫೈಯರ್ 1 ಅನ್ನು ಗೆದ್ದ ಮತ್ತು ಫೈನಲ್ ಅನ್ನು ಗೆದ್ದ ತಂಡಗಳು ಈ ಕೆಳಕಂಡಂತಿವೆ.
* 2018: ಚೆನ್ನೈ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
* 2019: ಮುಂಬೈ ಇಂಡಿಯನ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
* 2020: ಮುಂಬೈ ಇಂಡಿಯನ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
* 2021: ಚೆನ್ನೈ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
* 2022: ಗುಜರಾತ್ ಟೈಟಾನ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
* 2023: ಚೆನ್ನೈ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
* 2024: ಕೋಲ್ಕತ ನೈಟ್ ರೈಡರ್ಸ್ (ಕ್ವಾಲಿಫೈಯರ್ 1 ಗೆದ್ದಿದೆ)
ಈಗ ಆರ್ಸಿಬಿ ತಂಡ ಕ್ವಾಲಿಫೈಯರ್ 1ರಲ್ಲಿ ಗೆದ್ದಿದೆ. ಇದರೊಂದಿಗೆ, ಕಳೆದ ಏಳು ಸೀಸನ್ಗಳ ಭಾವನೆ ಈ ಬಾರಿಯೂ ಪುನರಾವರ್ತನೆಯಾಗಲಿದೆ ಮತ್ತು ಆರ್ಸಿಬಿ ಕಪ್ ಗೆಲ್ಲುತ್ತದೆ ಎಂದು ತಂಡದ ಅಭಿಮಾನಿಗಳು ಹೇಳುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ನ 18ನೇ ಆವೃತ್ತಿ. ಈ 18ನೇ ನಂಬರ್ಗೂ ಆರ್ಸಿಬಿಗೂ ಒಂದು ಬಿಡಿಸಲಾಗದ ಬಂಧವಿದೆ. ಅದೇನೆಂದರೆ, ಐಪಿಎಲ್ ಶುರುವಾದಾಗಿನಿಂದ ಆರ್ಸಿಬಿ ಪರ ಆಡುತ್ತಿರುವ ದಾಖಲೆಗಳ ಸರದಾರ, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಲಕ್ಕಿ ನಂಬರ್ 18. ಇದೇ ನಂಬರ್ ಅನ್ನು ನೀವು ವಿರಾಟ್ ಅವರ ಜರ್ಸಿಯ ಮೇಲೂ ನೋಡಬಹುದು. ನಾನು ಆಗಸ್ಟ್ 18ರಂದು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ನನ್ನ ತಂದೆ 2006ರ ಡಿಸೆಂಬರ್ 18ರಂದು ಮೃತಪಟ್ಟರು. ಈ ಎರಡು ಮಹತ್ವದ ಕ್ಷಣಗಳು 18ರಂದೇ ನಡೆಯಿತು. ಈ ದಿನಾಂಕದೊಂದಿಗೆ ಬ್ರಹ್ಮಾಂಡದ ಸಂಪರ್ಕವಿದೆ ಎಂದು ನನಗೆ ತೋರುತ್ತದೆ ಎಂದು ಈ ಹಿಂದೆ ಕೊಹ್ಲಿ ಹೇಳಿದ್ದಾರೆ. 18 ಕೊಹ್ಲಿಯ ಲಕ್ಕಿ ನಂಬರ್ ಆಗಿರುವುದರಿಂದ ಈ ಸೆಂಟಿಮೆಂಟ್ ನಿಜವಾದರೆ ಈ ಬಾರಿ ಆರ್ಸಿಬಿ ಐಪಿಎಲ್ ಟ್ರೋಫಿ ಜಯಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.
ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಮೇ 29) ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ಬೌಲರ್ಗಳ ಅಬ್ಬರದಿಂದ ಪಂಜಾಬ್ ಆರಂಭದಿಂದಲೇ ತೀವ್ರ ಸಂಕಷ್ಟದಲ್ಲಿ ಸಿಲುಕಿತು. 50 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು. ಆ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಕೈಕೊಟ್ಟರು. ಒಬ್ಬ ಬ್ಯಾಟ್ಸ್ಮನ್ ಕೂಡ 26 ರನ್ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಆ ತಂಡದಲ್ಲಿ ಅತಿ ಹೆಚ್ಚು ಸ್ಕೋರರ್ ಸ್ಟೊಯಿನಿಸ್. ಅವರು 26 ರನ್ ಗಳಿಸಿದರು. ಪಂಜಾಬ್ ಸತತ ವಿಕೆಟ್ಗಳನ್ನು ಕಳೆದುಕೊಂಡು ಅಂತಿಮವಾಗಿ 14.1 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಯಿತು. ಆರ್ಸಿಬಿ ಬೌಲರ್ಗಳು ನಿನ್ನೆ ಜಾದೂ ಮಾಡಿದರು. ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಸಲ್ವುಡ್ ತಲಾ 3 ವಿಕೆಟ್ ಪಡೆದರೆ, ಯಶ್ ದಯಾಳ್ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಇದಾದ ಬಳಿಕ ಸಣ್ಣ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 10 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 106 ರನ್ ಗಳಿಸಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (12 ರನ್, 2 ಬೌಂಡರಿ) ಬೇಗನೆ ಔಟಾದರು. ಫಿಲ್ ಸಾಲ್ಟ್ (ಅಜೇಯ 56 ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅಜೇಯ ಅರ್ಧಶತಕದೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 8 ವಿಕೆಟ್ಗಳಿಂದ ಕ್ವಾಲಿಫೈಯರ್ 1ರಲ್ಲಿ ಗೆದ್ದ ಆರ್ಸಿಬಿ, 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಆರ್ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ. (ಏಜೆನ್ಸೀಸ್)