

Virat Kohli : ಐಪಿಎಲ್ ಆರಂಭದಿಂದಲೂ ತಮ್ಮ ಚೊಚ್ಚಲ ಪ್ರಶಸ್ತಿಗಾಗಿ ಹೋರಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಸೀಸನ್ನಲ್ಲಿ ಟ್ರೋಫಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಬೌಲರ್ಗಳ ಅದ್ಭುತ ಪ್ರದರ್ಶನದೊಂದಿಗೆ ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದ ಆರ್ಸಿಬಿ, ಒಂಬತ್ತು ವರ್ಷಗಳ ನಂತರ 4ನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ. ಟ್ರೋಫಿ ಎತ್ತಿಹಿಡಿಯಲು ಆರ್ಸಿಬಿಗೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಈ ಪಂದ್ಯದಲ್ಲಿ ಜೋಶ್ ಹ್ಯಾಸಲ್ವುಡ್ ಅವರ ವೇಗ ಕಮಾಲ್ ಮಾಡಿದರೆ, ಸುಯಾಶ್ ಶರ್ಮಾ ಅವರ ಗೂಗ್ಲಿ ಜಾದೂ ಮಾಡಿತು. ಆದರೆ, ಪಂಜಾಬ್ ಕಿಂಗ್ಸ್ ಹೀನಾಯ ಸೋಲಿಗೆ ವಿರಾಟ್ ಕೊಹ್ಲಿ ಕೂಡ ಕಾರಣ ಎಂಬುದೇ ಅಚ್ಚರಿಯ ಸಂಗತಿ. ಅದು ಹೇಗೆ ಎಂಬ ನಿಮ್ಮೆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆರ್ಸಿಬಿ ತನ್ನ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ನೀಡಿರದ ಅಮೋಘ ಪ್ರದರ್ಶನವನ್ನು ನಿನ್ನೆ ನೀಡಿತು. ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಎಲ್ಲರಿಗಿಂತ ಒಂದು ಕೈ ಮೇಲಿತ್ತು. ಆದರೆ, ಈ ಭರ್ಜರಿ ಪ್ರದರ್ಶನದಿಂದಿರುವ ಶಕ್ತಿ ವಿರಾಟ್ ಕೊಹ್ಲಿ. ಹೌದು, ಹೆಚ್ಚಿನ ಒತ್ತಡದ ಪಂದ್ಯದಲ್ಲಿ ನಿನ್ನೆ ಮಾರ್ಗದರ್ಶಕರಾಗಿ ನಿಂತಿದ್ದು ಕೊಹ್ಲಿ. ತಂಡದ ಆಟಗಾರರಿಗೆ ನಿರ್ದೇಶನ ನೀಡುತ್ತಾ, ಫೀಲ್ಡಿಂಗ್ ಅನ್ನು ಸರಿಯಾಗಿ ಹೊಂದಿಸಿದರು. ಅಲ್ಲದೆ, ಬೌಲರ್ಗಳಿಗೆ ತಾವೇ ಖುದ್ದಾಗಿ ಹೋಗಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ಯಾವುದೇ ದೋಷ ಬರದಂತೆ ಬೌಲಿಂಗ್ ಪ್ಲಾನ್ಗಳನ್ನು ಯೋಜಿಸುತ್ತಿದ್ದರು. ಅದರ ಫಲಿತಾಂಶವೇ ನಿನ್ನೆ ಪಂದ್ಯದ ಅದ್ಭುತ ಗೆಲುವು.
ತಂಡದ ಅಧಿಕೃತ ನಾಯಕ ರಜತ್ ಪಾಟಿದಾರ್ ಅವರೇ ಆಗಿರಬಹುದು ಆದರೆ, ನಿನ್ನೆಯ ಪಂದ್ಯದ ಸಂಪೂರ್ಣ ಹಿಡಿತ ವಿರಾಟ್ ಕೊಹ್ಲಿ ಬಳಿ ಇತ್ತು. ಪಂದ್ಯ ನೋಡಿದವರಿಗೆ ಇದರ ಅರಿವು ಆಗಿರುತ್ತದೆ. ಕ್ವಾಲಿಫೈಯರ್ ಪಂದ್ಯದ ಕಂಪ್ಲೀಟ್ ಅಧಿಕಾರವನ್ನು ಕೊಹ್ಲಿ ತೆಗೆದುಕೊಂಡಿದ್ದರು. ಆಟಗಾರರನ್ನು ಮೈದಾನದಲ್ಲಿ ನಿರ್ದೇಶಿಸುವುದು, ಅವರನ್ನು ಸರಿಯಾದ ಸೂಚನೆಗಳೊಂದಿಗೆ ಫೀಲ್ಡಿಂಗ್ನಲ್ಲಿ ಹೊಂದಿಸುವುದು ಹಾಗೂ ಬೌಲರ್ಗಳಿಗೆ ಸರಿಯಾದ ಸಮಯದಲ್ಲಿ ಕೆಲವು ಟೆಕ್ನಿಕ್ಗಳನ್ನು ನೀಡುವ ಮೂಲಕ ತಮ್ಮ ಅನುಭವವನ್ನು ವಿರಾಟ್ ಕೊಹ್ಲಿ ಸರಿಯಾದ ಸಮಯಕ್ಕೆ ಬಳಸಿಕೊಂಡರು. ಇದರ ಪರಿಣಾಮ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಕ್ರಮಾಂಕ ತರಗೆಲೆಗಳಂತೆ ಉದುರಿ ಹೋದವು.
ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ಬೌಲರ್ಗಳ ಅಬ್ಬರದಿಂದ ಪಂಜಾಬ್ ಆರಂಭದಿಂದಲೇ ತೀವ್ರ ಸಂಕಷ್ಟದಲ್ಲಿ ಸಿಲುಕಿತು. 50 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು. ಆ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಕೈಕೊಟ್ಟರು. ಒಬ್ಬ ಬ್ಯಾಟ್ಸ್ಮನ್ ಕೂಡ 26 ರನ್ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಆ ತಂಡದಲ್ಲಿ ಅತಿ ಹೆಚ್ಚು ಸ್ಕೋರರ್ ಸ್ಟೊಯಿನಿಸ್. ಅವರು 26 ರನ್ ಗಳಿಸಿದರು. ಪಂಜಾಬ್ ಸತತ ವಿಕೆಟ್ಗಳನ್ನು ಕಳೆದುಕೊಂಡು ಅಂತಿಮವಾಗಿ 14.1 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಯಿತು.
ಆರ್ಸಿಬಿ ಬೌಲರ್ಗಳು ನಿನ್ನೆ ಜಾದೂ ಮಾಡಿದರು. ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಸಲ್ವುಡ್ ತಲಾ 3 ವಿಕೆಟ್ ಪಡೆದರೆ, ಯಶ್ ದಯಾಳ್ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಇದಾದ ಬಳಿಕ ಸಣ್ಣ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 10 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 106 ರನ್ ಗಳಿಸಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (12 ರನ್, 2 ಬೌಂಡರಿ) ಬೇಗನೆ ಔಟಾದರು. ಫಿಲ್ ಸಾಲ್ಟ್ (ಅಜೇಯ 56 ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅಜೇಯ ಅರ್ಧಶತಕದೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 8 ವಿಕೆಟ್ಗಳಿಂದ ಕ್ವಾಲಿಫೈಯರ್ 1ರಲ್ಲಿ ಗೆದ್ದ ಆರ್ಸಿಬಿ, 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಆರ್ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ.
ಇದೇ ಸಂದರ್ಭದಲ್ಲಿ, 9 ವರ್ಷಗಳ ಸುದೀರ್ಘ ಅಂತರದ ನಂತರ ಆರ್ಸಿಬಿ ಐಪಿಎಲ್ ಫೈನಲ್ ತಲುಪಿದ್ದರಿಂದ ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದು, ಸಂಭ್ರಮಿಸುತ್ತಿದ್ದಾರೆ. ಇದಲ್ಲದೆ, ಈ ವರ್ಷದ ಕಪ್ ನಮ್ಮದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಮ್ಮ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅವರು ಯಾವುದೇ ಎಡವಟ್ಟು ಮಾಡಿಲ್ಲ ಎಂದು ಸಂಭ್ರಮಿಸುತ್ತಿದ್ದಾರೆ. ಕಳೆದ ಏಳು ಸೀಸನ್ಗಳಲ್ಲಿ ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡ ಕಪ್ ಗೆದ್ದಿದೆ. ಈ ಭಾವನೆಯ ಪ್ರಕಾರ, ಆರ್ಸಿಬಿ ಈ ಬಾರಿ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಮಾತು ನಿಜವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)