IPL ಹರಾಜಿನಲ್ಲಿ ಭಾರತದ ಈ ಆಟಗಾರನಿಂದಲೇ ಸ್ಟಾರ್ಕ್​ ದಾಖಲೆ ಉಡೀಸ್​! ಇರ್ಫಾನ್ ಪಠಾಣ್ ಭವಿಷ್ಯ

IPL
Published on

IPL 2025 : ಐಪಿಎಲ್-2025 ಮೆಗಾ ಹರಾಜು ನವೆಂಬರ್​ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದೆ. ಈ ಮೆಗಾ ಹರಾಜಿನಲ್ಲಿ ಒಟ್ಟು 574 ಕ್ರಿಕೆಟಿಗರು ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಲಿದ್ದಾರೆ. ಭಾರತದ ಸ್ಟಾರ್ ಕ್ರಿಕೆಟಿಗರಾದ ರಿಷಭ್​ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಕೂಡ ಇದ್ದಾರೆ.

ಈ ಮೆಗಾ ಹರಾಜಿಗಾಗಿ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಹರಾಜಿಗೂ ಮುನ್ನವೇ ಟೀಮ್​ ಇಂಡಿಯಾ ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್, ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ರಿಷಭ್ ಪಂತ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಪಂತ್ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ ಎಂದು ಪಠಾಣ್ ಭವಿಷ್ಯ ನುಡಿದಿದ್ದಾರೆ.

ಕಳೆದ ಐಪಿಎಲ್-2024 ಮಿನಿ ಹರಾಜಿನಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ (ಕೆಕೆಆರ್) ತಂಡ ಆಸಿಸ್​ ವೇಗಿ ಮಿಚೆಲ್​ ಸ್ಟಾರ್ಕ್ ಅವರನ್ನು 24.75 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ಈ ಮೂಲಕ ಸ್ಟಾರ್ಕ್, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಈಗ ಅವರ ದಾಖಲೆ ಅಪಾಯದಲ್ಲಿದೆ, ಪಂತ್ ಖಂಡಿತವಾಗಿಯೂ ಅದನ್ನು ಮುರಿಯುತ್ತಾರೆ ಎಂದು ಪಠಾಣ್ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್​-2025 ಮೆಗಾ ಹರಾಜಿಗೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂತ್ ಅವರನ್ನು ಕೈಬಿಟ್ಟಿದೆ. ಇದರೊಂದಿಗೆ ಪಂತ್ ತಮ್ಮ ಹೆಸರನ್ನು ಹರಾಜಿನಲ್ಲಿ ಕನಿಷ್ಠ 2 ಕೋಟಿ ರೂ. ಮುಖಬೆಲೆಯೊಂದಿಗೆ ಎಂಟ್ರಿ ಕೊಟ್ಟಿರುವುದರಿಂದ ಹರಾಜಿನಲ್ಲಿ ಹಣದ ಸುರಿಮಳೆಯಾಗುವ ಸಾಧ್ಯತೆ ಇದೆ. ಪಂತ್​ಗಾಗಿ ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಐಪಿಎಲ್ ಮೂಲಗಳು ಬಹಿರಂಗಪಡಿಸಿವೆ.

2016ರಲ್ಲಿ ಐಪಿಎಲ್‌ಗೆ ಪಾದರ್ಪಣೆ ಮಾಡಿದ ರಿಷಭ್ ಎಂಟು ಸೀಸನ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಮೊದಲ ಬಾರಿಗೆ ಅವರನ್ನು ದೆಹಲಿ ಫ್ರಾಂಚೈಸಿ ಹರಾಜಿನಲ್ಲಿ ಬಿಡುಗಡೆ ಮಾಡಿದೆ. ಹೀಗಾಗಿ ಎಲ್ಲರ ಕಣ್ಣುಗಳು ಇದೀಗ ಪಂತ್ ಮೇಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net