

IPL 2025 : ನಿನ್ನೆ (ಏಪ್ರಿಲ್ 30) ನಡೆದ ಚೆನ್ನೈ ಸೂಪರ್ ಕಿಂಗ್ಸ್ ( CSK ) ಮತ್ತು ಪಂಜಾಬ್ ಕಿಂಗ್ಸ್ ( PBKS ) ನಡುವಿನ ಪ್ರಸಕ್ತ ಐಪಿಎಲ್ ಟೂರ್ನಿಯ 49ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ನಿರ್ಣಾಯಕ ಗೆಲುವು ಸಾಧಿಸಿ, ಪ್ಲೇಆಫ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿತು. ಮತ್ತೊಂದೆಡೆ ಚೆನ್ನೈ ತಂಡ ತವರು ನೆಲದಲ್ಲಿ ನಾಲ್ಕು ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸುವ ಮೂಲಕ ಪ್ಲೇಆಫ್ ರೇಸ್ನಿಂದ ಹೊರಬಿತ್ತು.
ಈ ಪಂದ್ಯದಲ್ಲಿ ಸಿಎಸ್‌ಕೆ ಮೊದಲು ಬ್ಯಾಟಿಂಗ್ ಮಾಡಿತು. ಎಡಗೈ ಬ್ಯಾಟರ್ ಸ್ಯಾಮ್ ಕರಣ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 47 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 88 ರನ್ ಗಳಿಸಿದರು. ಡೆವಾಲ್ಡ್ ಬ್ರೆವಿಸ್ (32) ಕೂಡ ಉಪಯುಕ್ತ ರನ್ ಕಾಣಿಕೆಯನ್ನು ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ, ಉಳಿದ ಯಾರೊಬ್ಬರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ ನಾಲ್ಕು ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಕೊನೆಯಲ್ಲಿ, ಯುಜುವೇಂದ್ರ ಚಾಹಲ್ ತಮ್ಮ ಅದ್ಭುತ ಬೌಲಿಂಗ್‌ನಿಂದ ಹ್ಯಾಟ್ರಿಕ್ ವಿಕೆಟ್ ಪಡೆದರು ಮತ್ತು ಚೆನ್ನೈ ತಂಡ 19.2 ಓವರ್‌ಗಳಲ್ಲಿ 190 ರನ್‌ಗಳಿಗೆ ಆಲೌಟ್ ಆಯಿತು.
191 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಪ್ರಭ್ ಸಿಮ್ರಾನ್ ಸಿಂಗ್ (ಇಂಪ್ಯಾಕ್ಟ್ ಪ್ಲೇಯರ್) 36 ಎಸೆತಗಳಲ್ಲಿ 54 ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 72 ರನ್ ಗಳಿಸಿದರು. ಶಶಾಂಕ್ ಸಿಂಗ್ (23) ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡವು 19.4 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿತು.
ಈ ಪಂದ್ಯದಲ್ಲಿ ಸಿಎಸ್‌ಕೆ ಸೋತರೂ ಆ ತಂಡದ ಆಟಗಾರ ಡೆವಾಲ್ಡ್ ಬ್ರೆವಿಸ್ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ಹೈಲೈಟ್ ಆಯಿತು. ಪಂಜಾಬ್ ಚೇಸಿಂಗ್ ಸಮಯದಲ್ಲಿ 18ನೇ ಓವರ್ ಅನ್ನು ರವೀಂದ್ರ ಜಡೇಜಾ ಎಸೆದರು. ಆ ಓವರ್ನ ಎರಡನೇ ಎಸೆತದಲ್ಲಿ ಪಂಜಾಬ್ ಬ್ಯಾಟ್ಸ್ಮನ್ ಶಶಾಂಕ್ ಸಿಂಗ್ ಭರ್ಜರಿ ಶಾಟ್ ಹೊಡೆದರು. ಆದರೆ, ಬೌಂಡರಿ ಲೈನ್ನಲ್ಲಿದ್ದ ಡೆವಾಲ್ಡ್ ಬ್ರೆವಿಸ್ ಪವಾಡವನ್ನೇ ಮಾಡಿದರು.
ಗಾಳಿಯಲ್ಲಿ ಬರುತ್ತಿದ್ದ ಚೆಂಡು, ಬೌಂಡರಿ ಲೈನ್ ಹೊರಗೆ ಬೀಳುತ್ತಿತ್ತು. ಆದರೆ, ಗಾಳಿಯಲ್ಲಿ ಹಾರಿದ ಬ್ರೆವಿಸ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಚೆಂಡು ಇನ್ನೇನು ಕೆಳಗೆ ಬೀಳಬೇಕು ಅಷ್ಟರಲ್ಲಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದ ಬ್ರೆವಿಸ್, ಬೌಂಡರಿ ಗೆರೆಯಿಂದಾಚೆಗೆ ಬೀಳುತ್ತಿದ್ದರು. ಈ ವೇಳೆ ಚೆಂಡನ್ನು ಮತ್ತೆ ಗಾಳಿಯಲ್ಲಿ ಎಸೆದರು. ಬಳಿಕ ಬೌಂಡರಿ ಗೆರೆಯಿಂದ ಮೈದಾನದ ಒಳಗಡೆ ಬಂದು ಮತ್ತೆ ಕ್ಯಾಚ್ ಹಿಡಿದರು. ಅವರು ಎರಡು ಬಾರಿ ಬೌಂಡರಿ ಲೈನ್ ದಾಟಿ ಚೆಂಡನ್ನು ಗಾಳಿಯಲ್ಲಿ ಹಾರಿಸಿದರು. ಈ ಮೂಲಕ ಅದ್ಭುತ ರೀತಿಯಲ್ಲಿ ಕ್ಯಾಚ್ ಹಿಡಿದರು. ಇದರೊಂದಿಗೆ, ಇಡೀ ಕ್ರೀಡಾಂಗಣ ಚಪ್ಪಾಳೆಯಿಂದ ತುಂಬಿತು.
ಬ್ರೆವಿಸ್ ಕ್ಯಾಚ್ ಹಿಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ವಾವ್.. ಎಂಥಾ ಅದ್ಭುತ ಕ್ಯಾಚ್ ಇದು... ನೀವು ಕೂಡ ಇಂತಹ ಕ್ಯಾಚ್ ಹಿಡಿಯಬಲ್ಲಿರಾ.. ಇದು ಐಪಿಎಲ್ ಇತಿಹಾಸದಲ್ಲೇ ಅದ್ಭುತ ಕ್ಯಾಚ್... ಎಂದು ಬ್ರೆವಿಸ್ ಮೇಲೆ ಹೊಗಳಿಕೆಯ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್)